ವಯನಾಡ್: ನ 08 (DaijiworldNews/MR): ಕೇರಳ ಪೊಲೀಸ್ ಪಡೆಯ ಥಂಡರ್ ಬೋಲ್ಟ್ ಕಮಾಂಡೋ ತಂಡ ಹಾಗೂ ನಕ್ಸಲರ ನಡುವೆ ವಯನಾಡು-ಕಣ್ಣೂರು ಅರಣ್ಯ ಪ್ರದೇಶದ ಚಪ್ಪರ ಕಾಲೊನಿಯಲ್ಲಿ ಗುಂಡಿನ ಚಕಮಕಿ ನಡೆದಿದೆ.
ನಿನ್ನೆ ರಾತ್ರಿ ಚಪ್ಪರ ಕಾಲೊನಿಗೆ ಬಂದ ನಕ್ಸಲರ ತಂಡವನ್ನು ಪೊಲೀಸರು ಸುತ್ತುವರೆದಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ನಕ್ಸಲರ ಗುಂಪಿನಲ್ಲಿ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಇದ್ದ ಎನ್ನಲಾಗುತ್ತಿದೆ. ಒಬ್ಬ ಪುರುಷ ಹಾಗೂ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದದ್ದಾರೆ. ವಶಕ್ಕೆ ಪಡೆದ ನಕ್ಸಲರಾದ ಚಂದ್ರು ಮತ್ತು ಉನ್ನಿಮಯ ಎಂದು ಗುರುತಿಸಲಾಗಿದೆ.
ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಪೆರಿಯಾ ಅರಣ್ಯ, ತಲಪುಳ, ಮಖಿಮಲ ಮತ್ತು ಅರಳಂ ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದೆ.ವಶಕ್ಕೆ ಪಡೆದಿರುವ ಆರೋಪಿಗಳನ್ನು ಕಲ್ಪೆಟ್ಟಾಗೆ ಸ್ಥಳಾಂತರಿಸಲಾಗಿದೆ ಎನ್ನಲಾಗುತ್ತಿದೆ.ಈ ಘಟನೆ ತಲಪುಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ನಡೆದಿದೆ. ಇಬ್ಬರು ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ಸ್ಥಳೀಯ ನಿವಾಸಿ ಅನೀಶ್ ಎಂಬವರ ಮನೆಗೆ ಬಂದ ನಕ್ಸಲರು ಆಹಾರ ತೆಗೆದುಕೊಂಡು ಬರುವ ವೇಳೆ ಅವರನ್ನು ಪೊಲೀಸರು ಸುತ್ತುವರೆದಿದ್ದಾರೆ. ಪೊಲೀಸರು ಶರಣಾಗುವಂತೆ ಸೂಚಿಸಿದರೂ ಸಹ ಅವರು ಸಿದ್ಧರಿಲ್ಲದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸ್ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮನೆಯ ಬಾಗಿಲು ಸೇರಿದಂತೆ ಮತ್ತಿತರೆ ವಸ್ತುಗಳಿಗೆ ಗುಂಡು ಹಾರಿಸಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ನಿನ್ನೆ ಕೋಝಿಕ್ಕೋಡ್ ಜಿಲ್ಲೆಯ ಮಾವೋವಾದಿ ನಾಯಕನನ್ನು ಬಂಧಿಸಲಾಗಿತ್ತು. ಇದೀಗ ವಯನಾಡಿನಲ್ಲಿ ಮಾವೋವಾದಿಗಳಿರುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.