ಬೆಂಗಳೂರು, ನ. 10 (DaijiworldNews/AK): 545 ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ನೇಮಕಾತಿ ಸಂಬಂಧದ ಅಧಿಸೂಚನೆಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಆರೋಪ ರಹಿತ ಹಲವು ಅಭ್ಯರ್ಥಿಗಳು ಹೈಕೋರ್ಟ್ ಮೊರೆಹೋಗಿದ್ದರು.
ಇದೀಗ ಹೈಕೋರ್ಟ್ ಮರುಪರೀಕ್ಷೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ನ್ಯಾಯಾಧೀಶ ಪಿ.ಎಸ್.ದಿನೇಶ್ ಕುಮಾರ್, ಟಿ.ಜಿ.ಶಿವಶಂಕರೇಗೌಡರಿದ್ದ ಪೀಠ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ. ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ.
545 ಪಿಎಸ್ಐಗಳ ನೇಮಕಾತಿಗಾಗಿ ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು.ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿದೆ.
ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದೀಗ ಎಡಿಜಿಪಿ ಅಮೃತ ಪಾಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮರುಪರೀಕ್ಷೆ ನಡೆಸಿದರೇ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತೆ. ಆಯ್ಕೆಯಾದ 490 ಅಭ್ಯರ್ಥಿಗಳಲ್ಲಿ 137 ಮಂದಿ ಮಹಿಳೆಯರಿದ್ದಾರೆ. ಮರು ಪರೀಕ್ಷೆಯಿಂದ ಅವರು ಮತ್ತೆ ಅಧ್ಯಯನ ಮಾಡಲು ಆಗುವುದಿಲ್ಲ. ಕೆಲವರು ಸರ್ಕಾರಿ, ಖಾಸಗಿ ಕಂಪನಿ ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳನ್ನು ನ್ಯಾಯಾಂಗ ತನಿಖೆ ವ್ಯಾಪ್ತಿಗೆ ಪರಿಗಣಿಸಿ. ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಪತ್ರ ಬರೆದಿದ್ದರು.