ನವದೆಹಲಿ, ನ, 15 (DaijiworldNews/PC): ಕಾಲ ಬದಲಾಗಿದೆ ಅದೆಷ್ಟೋ ಜನರು ತಂದೆಯ ಆಸ್ತಿಯನ್ನು ನಂಬಿ ಜೀವನವನ್ನು ನಡೆಸುತ್ತಾರೆ, ಇನ್ನೂ ಕೆಲವರು ತಂದೆಯ ಆಸ್ತಿಯನ್ನು ಕರಗಿಸುತ್ತಾರೆ. ಆದರೆ ಇನ್ನೂ ಹಲವರು ತಂದೆಯ ಆಸ್ತಿಯನ್ನು ಅಥವಾ ತಂದೆಯ ಕಂಪನಿಗಳನ್ನು ಮುನ್ನಡೆಸಿ ಅದರ ಅತ್ಯುತ್ತಮ ಅಭಿವೃದ್ದಿಗೆ ಕಾರಣಕರ್ತರಾಗಿರುತ್ತಾರೆ. ಅಂತಹ ಹಲವರಲ್ಲಿ ವಿನತಿ ಸರಫ್ ಮುತ್ರೇಜಾ ಕೂಡ ಒಬ್ಬರು.
ಹೌದು ಸರಫ್ ಮುತ್ರೇಜಾ ವಿನತಿ ಆರ್ಗಾನಿಕ್ಸ್ ಲಿಮಿಟೆಡ್ ಸಿಇಒ ಹಾಗೂ ಎಂಡಿ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಂಪನಿಯನ್ನು ವಿನತಿ ಅವರ ತಂದೆ ವಿನೋದ್ ಸರಫ್ 1989ರಲ್ಲಿ ಸ್ಥಾಪಿಸಿದ್ದರು. ಈ ಕಂಪನಿ ಜನಪ್ರಿಯ ನೋವುನಿವಾರಕ ಔಷಧಿ ಐಬುಪ್ರೊಫೆನ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. 2018ರಿಂದ ವಿನತಿ ಈ ಕಂಪನಿಯ ಸಿಇಒ ಹಾಗೂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ವಿನತಿ, ಭಾರತದ ಜನಪ್ರಿಯ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಇವರಿಗೆ ಇಟಿಪಿರೈಮ್ ವುಮೆನ್ ಲೀಡರ್ಶಿಪ್ ಅವಾರ್ಡ್ಸ್ (ಇಟಿಪಿಡಬ್ಲ್ಯೂಎಲ್ಎ) 2023ರಲ್ಲಿ ಕೂಡಾ ಭಾಗವಹಿಸಿದ್ದರು.
ವಿನೋದ್ ಸಫರ್ ಅವರು ವಿನತಿ ಆರ್ಗಾನಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು ಮಗಳ ಹೆಸರಿನಲ್ಲೇ ಪ್ರಾರಂಭಿಸಿದ್ದರು.ಪ್ರಸ್ತುತ ಈ ಕಂಪನಿಯ ಮಾರುಕಟ್ಟೆ ಬಂಡವಾಳ 18,032 ಕೋಟಿ ರೂ. ವಿನತಿ 2006ರಲ್ಲಿ ವಿಒಎಲ್ ಸೇರ್ಪಡೆಗೊಂಡಿದ್ದರು ಹಾಗೂ ಕಂಪನಿಯ ಕಾರ್ಯನಿರ್ವಾಹಣ ತಂಡದಲ್ಲಿ 16ವರ್ಷಗಳ ಕಾರ್ಯಾನುಭವ ಹೊಂದಿದ್ದಾರೆ.
ದಿ ವಾರ್ಟನ್ ಸ್ಕೂಲ್ ನಿಂದ ಅರ್ಥಶಾಸ್ತ್ರದಲ್ಲಿ (ಹಣಕಾಸು) ಪದವಿ ಪಡೆದಿರುವ ವಿನತಿ, ಪೆನ್ನೆಸೆಲ್ವಿನಿಯಾ ಯುನಿವರ್ಸಿಟಿ ಸ್ಕೂಲ್ ಆಫ್ ಇಂಜಿನಿಯರಿಂಗ್ ನಿಂದ ಅಪ್ಲೈಡ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ವಿನತಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಹಳೆಯ ವಿದ್ಯಾರ್ಥಿ ಕೂಡ ಆಗಿದ್ದಾರೆ. ರಸಾಯನಶಾಸ್ತ್ರದಲ್ಲಿ ವಿನತಿ ತುಂಬಾ ಆಸಕ್ತಿ ಹೊಂದಿದ್ದರು. ಇದೇ ಆಸಕ್ತಿ ಅವರಿಗೆ ತಮ್ಮ ತಂದೆಯ ಉದ್ಯಮವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನೆರವು ನೀಡಿತು.
ವಿನತಿ ಆರ್ಗಾನಿಕ್ಸ್ ಲಿಮಿಟೆಡ್ ಮುಂಬೈನಲ್ಲಿ ಮುಖ್ಯಕಚೇರಿ ಹೊಂದಿದೆ. ಇದು ಕೆಮಿಕಲ್ಸ್ ಹಾಗೂ ಆರ್ಗಾನಿಕ್ಸ್ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಜನಪ್ರಿಯತೆ ಗಳಿಸಿದೆ. ಇದು ಫಾರ್ಮಾ, ನೀರು ಶುದ್ಧೀಕರಣ, ನಿರ್ಮಾಣ, ಇಮುಲ್ಸನ ಪೇಯಿಂಟ್ ಇತ್ಯಾದಿ ಉತ್ಪಾದಿಸುತ್ತದೆ.
ಇವರು ಉದ್ಯಮ ರಂಗದಲ್ಲಿ ಮಾಡಿರುವ ಸಾಧನೆ ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಲಾಗಿದೆ. ಎಕನಾಮಿಕ್ ಟೈಮ್ಸ್ನಿಂದ ವರ್ಷದ ವ್ಯಾಪಾರ ನಾಯಕಿ ಮತ್ತು ಫೋರ್ಬ್ಸ್ನಿಂದ ಏಷ್ಯಾದ ಅತ್ಯಂತ ಶಕ್ತಿಶಾಲಿ ವ್ಯಾಪಾರ ಮಹಿಳೆ ಎಂದು ಹೆಸರಿಸಿರುವುದು ಸೇರಿದಂತೆ ವಿವಿಧ ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದ್ದಾರೆ. ಇನ್ನು ವಿನತಿ ಅವರು ಮೇಕ್-ಎ-ವಿಶ್ ಇಂಡಿಯಾ ಮಂಡಳಿಯ ನಿರ್ದೇಶಕರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ ಕೂಡ. ಭಾರತದ ಜನಪ್ರಿಯ ಮಹಿಳಾ ಉದ್ಯಮಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ವಿನತಿ, ತನ್ನ ಸಂಸ್ಥೆಯ ಏಳಿಗೆಗೆ ಇನ್ನಷ್ಟು ಶ್ರಮಿಸುತ್ತಿದ್ದಾರೆ.