ತೆಲಂಗಾಣ, ನ 26(DaijiworldNews/AK): ತೆಲಂಗಾಣದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಚುನಾವಣಾ ಪ್ರೇರಿತ ಮತ್ತು ಸತ್ಯಕ್ಕೆ ದೂರವಾಗಿದೆ. ಕರ್ನಾಟಕ ರಾಜ್ಯದ ಜನತೆಯನ್ನು ಮೋಸ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲ ಪಂಚ ಗ್ಯಾರಂಟಿಗಳನ್ನು 5 ವರ್ಷಗಳವರೆಗೆ ಅನುಷ್ಠಾನಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ತೆಲಂಗಾಣ ರಾಜ್ಯಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತು. ನಾವು ಅಧಿಕಾರ ಸ್ವೀಕರಿಸಿದ ಮೇ 20 ರ ದಿನದಂದೇ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರಂಟಿಗಳ ಅನುಷ್ಠಾನಗೊಳಿಸಲು ಸಂಪುಟ ಸಭೆ ನಡೆಸಿ ತೀರ್ಮಾನಿಸಿ, ಸಂಬಂಧಪಟ್ಟ ಸರ್ಕಾರಿ ಆದೇಶಗಳನ್ನು ಅಂದೇ ನೀಡಲಾಯಿತು ಎಂದರು.
ನಮ್ಮ ಮೊದಲ ಗ್ಯಾರಂಟಿಯಾದ ಮಹಿಳೆರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯನ್ನು ಜೂನ್ 11 ರಿಂದ ಜಾರಿಗೊಳಿಸಲಾಯಿತು. ನಿನ್ನೆಯ ದಿನ ರಾಜ್ಯದಲ್ಲಿ 100.47 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನದ ಸಂಭ್ರಮವನ್ನು ಆಚರಿಸಲಾಯಿತು. ರಾಜ್ಯದಲ್ಲಿ ಯಾವ ಜಾತಿಧರ್ಮಗಳ ಬೇಧವಿಲ್ಲದೇ ಪ್ರತಿದಿನ 60 ಲಕ್ಷ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಾತೆ. ಶ್ರಮಿಕ , ಉದ್ಯೋಗಸ್ಥ ಸೇರಿದಂತೆ ಎಲ್ಲ ವರ್ಗದ ಮಹಿಳೆಯರು ಯೋಜನೆಯ ಲಾಭಪಡೆಯುತ್ತಿದ್ದು, ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ತೆಲಂಗಾಣದ ಮುಖ್ಯಮಂತ್ರಿಗಳು ಚುನಾವಣೆಯ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಆದರೆ ಇಲ್ಲಿನ ಇತರೆ ಪಕ್ಷಗಳು ಏಕೆ ಸುಳ್ಳು ಹೇಳುತ್ತಿವೆ ಎಂದು ಪ್ರಶ್ನಿಸಿದರು.
ರಾಜ್ಯದ ಆರ್ಥಿಕತೆ ಸದೃಢವಾಗಿದ್ದು, ಅನುದಾನಕ್ಕೆ ಕೊರತೆ ಇಲ್ಲ. ಆದ್ದರಿಂದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಖಂಡಿತ ಜಯ ಸಾಧಿಸಲಿದ್ದು, ಅಧಿಕಾರಕ್ಕೆ ಬರಲಿದೆ. ತೆಲಂಗಾಣದಲ್ಲಿ ಪಕ್ಷ ನೀಡಿರುವ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಲಿದ್ದು, ಇದರ ಬಗ್ಗೆ ತೆಲಂಗಾಣ ಜನರಿಗೆ ಯಾವುದೇ ಸಂಶಯ ಬೇಡ ಎಂದರು.