ಬೆಂಗಳೂರು, ನ 26(DaijiworldNews/AK): ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ ಕುರಿತು ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿಯವರು ದೆಹಲಿಯಲ್ಲಿ ಚರ್ಚಿಸಲಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಂದು ಬಿಡಿದಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಸೀಟು ಹಂಚಿಕೆ ಕುರಿತು ಇವತ್ತು ಚರ್ಚಿಸಿಲ್ಲ ಎಂದು ಹೇಳಿದರು.
ಪಕ್ಷಗಳ ಗೆಲುವಿನ ಕಾರ್ಯತಂತ್ರವನ್ನು ನಾಲ್ಕು ಗೋಡೆಗಳ ನಡುವೆ ಕುರಿತು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ವಿಜಯಪತಾಕೆ ಹಾರಿಸಲಿವೆ. ಜನರೂ ಅದಕ್ಕೆ ಆಶೀರ್ವಾದ ಮಾಡುತ್ತಾರೆ. 28ಕ್ಕೆ 28 ಕ್ಷೇತ್ರಗಳು ಎಂದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಅದರಲ್ಲಿ ಸೇರಿದೆ ಎಂದು ವಿಶ್ವಾಸದಿಂದ ನುಡಿದರು.
ಕಾಂಗ್ರೆಸ್ನ ಒಬ್ಬರೇ ಒಬ್ಬ ಸಂಸದರೂ ಇರಬಾರದು. ರಾಜ್ಯದ ಹಿತದೃಷ್ಟಿಯಿಂದ ಅದು ಒಳ್ಳೆಯದಲ್ಲ ಎಂದು ರಾಜ್ಯದ ಜನತೆ ತೀರ್ಮಾನಿಸಲಿದ್ದಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು,ಬಿಜೆಪಿ ಒಂದು ದೊಡ್ಡ ರಾಷ್ಟ್ರೀಯ ಪಕ್ಷ. ಸಣ್ಣ ಪುಟ್ಟ ಗೊಂದಲ, ವ್ಯತ್ಯಾಸಗಳಿದ್ದರೂ ಎಲ್ಲರ ಗುರಿ ಒಂದೇ ಆಗಿದೆ. ಮತ್ತೊಮ್ಮೆ ಈ ದೇಶದಲ್ಲಿ ನರೇಂದ್ರ ಮೋದಿಜೀ ಅವರು ಪ್ರಧಾನಿ ಆಗಬೇಕೆಂಬ ವಿಷಯದಲ್ಲಿ ಯಾವುದೇ ತಕರಾರಿಲ್ಲ. ನಮ್ಮ ಪಕ್ಷದ ಅನೇಕ ಹಿರಿಯರು ಈ ಕುರಿತು ಮತ್ತೆ ಮತ್ತೆ ಹೇಳಿದ್ದಾರೆ. ಹಾಗಾಗಿ ಏನೇ ಸಣ್ಣ ಪುಟ್ಟ ಗೊಂದಲಗಳಿದ್ದರೂ ಅವೆಲ್ಲವನ್ನೂ ಕೂಡ ಸರಿಪಡಿಸುವ ಶಕ್ತಿಯನ್ನು ಆ ಭಗವಂತ ನಮಗೂ ಕೂಡ ಕೊಟ್ಟಿದ್ದಾನೆ. ಹಿರಿಯರ ಮಾರ್ಗದರ್ಶನದೊಂದಿಗೆ ಪಕ್ಷ ಮುನ್ನಡೆಸುವೆ ಎಂದು ಅವರು ಪಕ್ಷದ ಗೊಂದಲ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು.
ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಜೀ, ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ, ಅಮಿತ್ ಶಾ ಜೀ ಮತ್ತು ಮಾನ್ಯ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಚರ್ಚಿಸಿದ ಬಳಿಕ ದೇಶ, ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ, ಒಂದಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಬೇಕೆಂದು ನಿರ್ಣಯಿಸಿ ಸಾಕಷ್ಟು ದಿನಗಳು ಕಳೆದಿವೆ ಎಂದರು.
ನಾನು ರಾಜ್ಯಾಧ್ಯಕ್ಷನ ಜವಾಬ್ದಾರಿ ತೆಗೆದುಕೊಂಡ ನಂತರ ಹಿರಿಯರು ಮತ್ತು ಮಾಜಿ ಪ್ರಧಾನಿಗಳಾದ ದೇವೇಗೌಡಜೀ ಅವರನ್ನು ಭೇಟಿ ಮಾಡಿದ್ದೇನೆ. ಸಮಗ್ರವಾಗಿ ಚರ್ಚೆ ನಡೆಸಿದ್ದೇನೆ. ಇವತ್ತು ಹಿರಿಯರು, ಮಾಜಿ ಸಿಎಂ, ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯು ಈ ರಾಜ್ಯ ಮಾತ್ರವಲ್ಲ; ಈ ದೇಶದ ಭವಿಷ್ಯವನ್ನು ರೂಪಿಸಲಿದೆ. ಅದನ್ನು ಗಂಭೀರವಾಗಿ ತೆಗೆದುಕೊಂಡು 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್ ಒಂದಾಗಿ ವಿಜಯಪತಾಕೆ ಹಾರಿಸಬೇಕೆಂದು ಆಶಿಸಿದರು.
ಕರ್ನಾಟಕದ ರೈತವಿರೋಧಿ, ಬಡವರ ವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ಪಕ್ಷದ ಭ್ರಷ್ಟ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಎರಡೂ ಪಕ್ಷಗಳು ಒಟ್ಟಾಗಿ ಮುಂದೆ ಸಾಗಲಿವೆ. ಒಟ್ಟಾಗಿ ಕೂತು ಚರ್ಚೆ ಮಾಡಿ, ಮುಂದಿನ ಅಧಿವೇಶನದಲ್ಲೂ ಕೂಡ ಈ ಸರಕಾರಕ್ಕೆ ಬುದ್ಧಿ ಕಲಿಸಬೇಕಿದೆ ಎಂದು ತಿಳಿಸಿದರು. ಈ ವಿಷಯದ ಕುರಿತು ಚರ್ಚಿಸಿದ್ದೇವೆ ಎಂದು ತಿಳಿಸಿದರು.