ಬೀದರ್ , ನ 27(DaijiworldNews/AK): ತನಿಖೆ ನಡೆದರೆ ಮತ್ತೆ ಜೈಲಿಗೆ ಹೋಗುತ್ತಾರೆ . ಡಿಕೆ ಶಿವಕುಮಾರ್ಗೆ ಖಾತ್ರಿ ಇದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಭಗವಂತ ಖೂಬಾ ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡ.ಕೆ ಶಿವಕುಮಾರ್ ಲೂಟಿ ಹೊಡೆದು ಆಸ್ತಿ ಹೆಚ್ಚಳ ಮಾಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಣಯ ಅವರ ವಿರುದ್ದ ಇದೆ ಎಂಬ ಕಾರಣಕ್ಕೆ ಹಿಂದಕ್ಕೆ ಪಡೆದುಕೊಳ್ಳುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಸರ್ಕಾರ ಉತ್ತರಿಸಬೇಕಾಗುತ್ತದೆ ಎಂದರು.
ಯಾದಗಿರಿಯಲ್ಲಿ ಸಿಕ್ಕಿಬಿದ್ದಿರುವ ಪಡಿತರ ಅಕ್ಕಿ ಒಂದು ಉದಾಹರಣೆ ಅಷ್ಟೇ . ಪ್ರತಿ ಜಿಲ್ಲೆಯಲ್ಲಿ ಪ್ರತಿ ಇಲಾಖೆಯಲ್ಲಿ ಇಂತಹ ವ್ಯವಹಾರಗಳು ನಡೆಯುತ್ತಿವೆ. ಜನಸಾಮಾನ್ಯರಿಗೆ ಸಿಗಬೇಕಾದ ಸವಲತ್ತುಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜದ ಸಮುದಾಯಗಳನ್ನು ಒಡೆದು ರಾಜಕೀಯ ಮಾಡಿ ಕರ್ನಾಟಕದ ಸಂಪೂರ್ಣ ಅರ್ಥವ್ಯವಸ್ಥೆ ಹದಗೆಡಿಸಿದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿದೆ. ಉಡಾಫೆ ಮಾತುಗಳನ್ನು ಆಡುವುದೇ ಕಾಂಗ್ರೆಸ್ ಸರ್ಕಾರದ ಆರು ತಿಂಗಳ ಸಾಧನೆ ಎಂದು ಕಿಡಿಕಾರಿದರು.