ರಾಮನಗರ,ನ 27(DaijiworldNews/PC): ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವು ನಡೆಸುತ್ತಿರುವ ಜನತಾ ದರ್ಶನ ಕಾರ್ಯಕ್ರಮಕ್ಕೆ ವಿರುದ್ದವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ಒಂದನ್ನು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟಕ್ಕೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನತಾ ದರ್ಶನ ಕಾರ್ಯಕ್ರಮಕ್ಕೆ ಜನರ ತೆರಿಗೆ ಹಣ ಖರ್ಚು ಮಾಡಿ ಜಾಹಿರಾತು ನೀಡುತ್ತಿದ್ದಾರೆ. ಪ್ರತಿ ದಿನ ಆ ಜಾಹೀರಾತುಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ನಾನು, ಯಡಿಯೂರಪ್ಪ ಇದ್ದಾಗ ಹೇಗೆ ಜನತಾದರ್ಶನ ನಡೆಸಿದೆವು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಬಿಡುವು ಪಡೆಯದೇ ಅಸಂಖ್ಯಾತ ಜನರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕೊಡುತ್ತಿದ್ದ ಆ ದಿನಗಳನ್ನು ಜನರು ಮರೆತಿಲ್ಲ ಎಂದರು.ಲೋಕಸಭೆ ಚುನಾವಣೆವರೆಗೂ ಕಾಂಗ್ರೆಸ್ ಸರ್ಕಾರ ‘ಜಾತಿಗಣತಿ’ ನಾಟಕ ಆಡುತ್ತದೆ ಆನಂತರವೂ ಈ ಸರ್ಕಾರದಿಂದ ಏನೂ ಆಗದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದರು.