ಬೆಂಗಳೂರು, ನ 27(DaijiworldNews/AK): ರಾಜಧಾನಿ ಬೆಂಗಳೂರಲ್ಲಿ ಸದ್ದಿಲ್ಲದೇ ಮಕ್ಕಳ ಮಾರಾಟ ಮಾಡುವ ಜಾಲವೊಂದನ್ನು ಸಿಸಿಬಿ ಅಧಿಕಾರಿಗಳು ಭೇದಿಸಿ ನಾಲ್ವರನ್ನು ಬಂಧಿಸಿದ್ದಾರೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನವಜಾತ ಶಿಶು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಕಣ್ಣನ್ ರಾಮಸ್ವಾಮಿ, ಹೇಮಲತಾ, ಮುರುಗೇಶ್ವರಿ ಹಾಗೂ ಶರಣ್ಯ ಎಂದು ಗುರುತಿಸಲಾಗಿದೆ. ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸ್ ಅಧಿಕಾರಿಗಳು ಆರೋಪಿಗಳಿ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯೊಬ್ಬರಿಗೆ ಮಗುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಗ್ಯಾಂಗ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ ಎನ್ನಲಾಗಿದೆ.
ಮಗುವನ್ನು ಖರೀದಿಸಲು ಬಯಸಿದ್ದ ಮಹಿಳೆಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇನ್ನೂ ಆಕೆಯನ್ನು ಬಂಧಿಸಿಲ್ಲ. ಬಂಧಿತ ನಾಲ್ವರಿಂದ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ದಂಧೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಇನ್ಸ್ಪೆಕ್ಟರ್ ನಯಾಜ್ ಅಹ್ಮದ್ ನೇತೃತ್ವದ ತಂಡವು ತಮಿಳುನಾಡು ನೋಂದಣಿಯೊಂದಿಗೆ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿದೆ. ನವಜಾತ ಶಿಶುಗಳನ್ನು ಮಾರಾಟ ಮಾಡಲು ಮಕ್ಕಳಿಲ್ಲದ ದಂಪತಿಗಳನ್ನು ಗುಂಪು ಟಾರ್ಗೆಟ್ ಮಾಡಲಾಗಿತ್ತು. ಮಹಾಲಕ್ಷ್ಮಿ ಅವರಿಗೆ ಮಗುವಿಗೆ ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು.
ಅರೋಪಿಗಳಿಂದ ಮೂರು ಮೊಬೈಲ್ ಫೋನ್ ಹಾಗೂ ಒಂದು ಕಾರು, ಒಟ್ಟು 3.15 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಮಗುವನ್ನು ಕದ್ದಿದ್ದಾನಾ ಅಥವಾ ಬೇರೊಬ್ಬ ಮಹಿಳೆಯಿಂದ ಮಗುವನ್ನು ಖರೀದಿಸಿದ್ದಾನಾ ಅಥವಾ ಆರೋಪಿಗಳಲ್ಲಿ ಒಬ್ಬರು ಮಗುವಿನ ತಾಯಿಯೇ ಎಂಬುದು ನಮಗೆ ಖಚಿತವಾಗಿಲ್ಲ. ಆರೋಪಿಯು ದೊಡ್ಡ ದಂಧೆಯ ಭಾಗವಾಗಿರಬೇಕು. ಈ ಬಗ್ಗೆ ವಿಸ್ತೃತ ತನಿಖೆ ಆರಂಭಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸಿಸಿಬಿ ಪೊಲೀಸರು ಐವರು ಆರೋಪಿಗಳ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಅಡಿಯಲ್ಲಿ ಇತರ ಐಪಿಸಿ ಸೆಕ್ಷನ್ನೊಂದಿಗೆ ಪ್ರಕರಣವನ್ನು ದಾಖಲಿಸಲಾಗಿದೆ.