ಬೆಂಗಳೂರು, ನ 27(DaijiworldNews/Ak): ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆ. ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹಿರಾತಿನ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹಿರಾತಿನಲ್ಲಿ ತಿಳಿಸಿಲ್ಲ.
ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಾವು ಪತ್ರಿಕೆ ಹಾಗೂ ಮ್ಯಾಗಝಿನ್ ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ.ನಾವು ಮತ ಯಾಚನೆ ಮಾಡಿದ್ದರೆ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೊಟೀಸ್ ಗೆ ಉತ್ತರ ನೀಡುವುದಾಗಿ ಎಂದು ಹೇಳಿದರು..