ಬೆಂಗಳೂರು, ನ 27(DaijiworldNews/AK): ಇವತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು, 2ನೇ ಕಂತು ಬಂತು. 3ನೇ ಕಂತು ಬೇಕು, 3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನಗಳಲ್ಲಿ ಎಂದು ಟೀಕಿಸಿದರು.
ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿಗೇ ನೀಡಿದ್ದಾರೆ. ಹಾಗಾಗಿ 3ನೇ ಕಂತಿಗಾಗಿ ಬಂದಂತಿದೆ ಎಂದು ತಿಳಿಸಿದರು.
ಕರ್ನಾಟಕ ಇನ್ನೆಷ್ಟು ಕಂತು ಕೊಡಬೇಕೋ? ಎಂದು ಕೇಳಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡುವ ಬಗ್ಗೆ ನಾವು ಮುಂಚೆಯೇ ತಿಳಿಸಿದ್ದೆವು. ಕಾಂಗ್ರೆಸ್ ಗೆಲ್ಲಿಸಬೇಡಿ ಎಂದು ಜನರಿಗೆ ಮನವಿ ಮಾಡಿದ್ದೆವು. ಆದರೆ, ಅದನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ. ಗ್ಯಾರಂಟಿ ಆಸೆಗೋ, ಇನ್ಯಾವುದೋ ಕಾರಣಕ್ಕೋ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಸುರ್ಜೇವಾಲಾ ಮೇಲೆ ಹದ್ದಿನ ಕಣ್ಣಿಡಬೇಕು. ಈಗ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಐಟಿ ದಾಳಿ ವೇಳೆ ಇಲ್ಲಿ ಸಿಕ್ಕಿದ್ದ 102 ಕೋಟಿಯೂ ಕಾಂಗ್ರೆಸ್ಸಿಗಾಗಿ ಸಂಗ್ರಹಿಸಿದ ಹಣ. ಚುನಾವಣೆ ಆಯೋಗ, ಐಟಿ, ಇ.ಡಿ,ಗಳು ಸುರ್ಜೇವಾಲಾ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಸಿ.ಟಿ.ರವಿ ಅವರು ಆಗ್ರಹಿಸಿದರು.
ಇವತ್ತೇ ಹಣ ಹೋಗುವ ಸಾಧ್ಯತೆ ಇದೆ ಎಂದು ನುಡಿದರು.