ಶಿವಮೊಗ್ಗ, ನ 29(DaijiworldNews/AK): ಗುಡುಗು, ಸಿಡಿಲು, ಮಳೆ, ಬಿರುಗಾಳಿ ಏನೇ ಬಂದರೂ ಪಕ್ಷದ ಹಿರಿಯರಾದ ಯಡಿಯೂರಪ್ಪ, ಈಶ್ವರಪ್ಪ ಮತ್ತಿತರ ರಾಜ್ಯದ ಎಲ್ಲ ಹಿರಿಯರ ಆಶೀರ್ವಾದ, ಕಾರ್ಯಕರ್ತರ ನೆರವಿನಿಂದ ಬಿಜೆಪಿ ಎಂಬ ವಿಮಾನವನ್ನು ಸೇಫ್ ಆಗಿ ಲ್ಯಾಂಡ್ ಮಾಡಲಿದ್ದೇನೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಬಳಿಕ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ್ದ ಅವರು ಶಿವಮೊಗ್ಗದಲ್ಲಿ ಕಾರ್ಯಕರ್ತರು ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ನನ್ನ 49 ವರ್ಷಕ್ಕೆ ರಾಜ್ಯಾಧ್ಯಕ್ಷ ಆಗಿದ್ದೇನೆ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಪರಿಶ್ರಮದೊಂದಿಗೆ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿ, ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ಮೂಲಕ ಮೋದಿಜೀ ಅವರ ಕೈಗಳನ್ನು ಬಲಪಡಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿವೇಶನದ ವೇಳೆ ಬೆಳಗಾವಿ ಭಾಗದ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ. ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ರಾಜ್ಯದ ಯುವಕರು, ತಾಯಂದಿರು ಸೇರಿ ಎಲ್ಲರೂ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ವಿಜಯೇಂದ್ರನಲ್ಲಿ ಯಡಿಯೂರಪ್ಪ ಅವರನ್ನು ಜನರು ನೋಡುತ್ತಿದ್ದಾರೆ. ಆದ್ದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಪ್ರತಿದಿನ ಪ್ರವಾಸ ಮಾಡಲು ತಂದೆ, ಯಡಿಯೂರಪ್ಪ ಅವರು ತಿಳಿಸಿದ್ದಾರೆ ಎಂದರು. ಅಧ್ಯಕ್ಷತೆ ಲಭಿಸಿದ ಮಾರನೇ ದಿನ ಗಾಂಧಿನಗರ ಬೂತ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಇದು ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಎಂದು ತಿಳಿಸಿದರು. ರಾಷ್ಟ್ರೀಯ ಅಧ್ಯಕ್ಷರಿಗೆ ಸಮನಾದ ಗೌರವವನ್ನು ಪಕ್ಷದ ಬೂತ್ ಅಧ್ಯಕ್ಷರಿಗೂ ಕೊಡುವ ಪಕ್ಷ ಬಿಜೆಪಿ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಕೇವಲ 6 ತಿಂಗಳಲ್ಲಿ ಜನಪ್ರಿಯತೆ ಕಳಕೊಂಡಿದೆ. ಜನರು ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಶೇ 80 ಕಮಿಷನ್ನ ಸರಕಾರ. ಈ ಸರಕಾರಕ್ಕೆ ಪ್ರಜ್ಞಾವಂತ ಮತದಾರರು ಪಾಠ ಕಲಿಸುತ್ತಾರೆ ಎಂದು ಸವಾಲೆಸೆದರು.
ಜಾತಿ ಗಣತಿ ಮಾಡಿದ ಕಾಂತರಾಜ್ ವರದಿಯನ್ನು ಕಾತರದಿಂದ ಸ್ವೀಕರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಡಿಸಿಎಂ ಸೇರಿ ಅನೇಕ ಸಮಾಜದವರು ಈ ವರದಿಯ ವಿರುದ್ಧ ಇದ್ದಾರೆ. ಅರೆಬರೆ ಬೆಂದ ಅವೈಜ್ಞಾನಿಕ ವರದಿಯನ್ನು ನೀಡಲಾಗಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.ಬಿಜೆಪಿ ಜಾತಿಗಣತಿ ವಿರೋಧಿಯಲ್ಲ; ಜಾತಿ ಸಮೀಕ್ಷೆ ನ್ಯಾಯಸಮ್ಮತ ಆಗಿರಲಿ ಎಂದು ತಿಳಿಸಿದರು.