ಬೆಂಗಳೂರು, ನ 30 (DaijiworldNews/AK): ಭ್ರೂಣ ಹತ್ಯೆ ಪ್ರಕರಣ ಗಳಿಂದಾಗಿ ನಮ್ಮ ಇಲಾಖೆಗೆ ಅವಮಾನ ಆದಂತಾಗಿದೆ ಎಂಬುದನ್ನು ಒಪ್ಪಿಕೊಂಡ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದು ಯಾರೂ ಒಪ್ಪುವಂಥದ್ದಲ್ಲ ಎಂದರು. ಭ್ರೂಣಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.
ಈ ವಿಚಾರದಲ್ಲಿ ಸ್ಪಷ್ಟ ಕಾನೂನುಗಳಿದ್ದು, ಅವುಗಳ ಜಾರಿ ಆಗಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಕಾಸಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಭ್ರೂಣ ಹತ್ಯೆ ಪ್ರಕರಣ ಗಳಿಂದಾಗಿ ನಮ್ಮ ಇಲಾಖೆಗೆ ಅವಮಾನ ಆದಂತಾಗಿದೆ ಎಂಬುದನ್ನು ಒಪ್ಪಿಕೊಂಡ ಅವರು, ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಭ್ರೂಣ ಹತ್ಯೆ ಪ್ರಕರಣದ ತನಿಖೆಯು ಪೊಲೀಸರ ಮೂಲಕ ನಡೆಯುತ್ತಿದ್ದು, ಇದಕ್ಕೆ ಆರೋಗ್ಯ
ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಪೊಲೀಸರು ಇಂತಹದೊಂದು ಜಾಲ ಪತ್ತೆ ಮಾಡುವ ಮೂಲಕ ನಮ್ಮ ಇಲಾಖೆ ಕಣ್ಣು ತೆರೆಸಿದ್ದರೆ. ಇಂತಹ ಘಟನೆಗಳು ಮರುಕಳಿಸದಂತೆಯೂ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ಇದೊಂದು ಸಾಮಾಜಿಕ ಪಿಡುಗಾಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ.ಗರ್ಭಿಣಿಯರ ನೋಂದಣಿ ಪ್ರಕ್ರಿಯೆ, ಅವರ ಆರೈಕೆ ಪ್ರಕ್ರಿಯೆ, ಜನನ ಪ್ರಮಾಣದ ಪರಿಶೀಲನೆ ಹಾಗೂ ಸ್ಕ್ಯಾ ನಿಂಗ್ ಕೇಂದ್ರಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಸರಕಾರದಲ್ಲಿ ನೋಂದಣಿ ಮಾಡಿಸಿಕೊಂಡ ಗರ್ಭಿಣಿಯರಿಗೆ ಪ್ರಸವ ಆಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಬೇಕು. ಇದನ್ನು ಬೆಂಬಿಡದೆ ನಿಗಾ ಇಡಬೇಕು. ಸ್ಕ್ಯಾ ನಿಂಗ್ ಕೇಂದ್ರಗಳ ತಪಾಸಣೆಯನ್ನು ನಡೆಸಿ ತಿಂಗಳಿಗೊಮ್ಮೆ ಅಧಿಕಾರಿಗಳ ಹಂತದಲ್ಲಿ ಸಭೆಗಳನ್ನು ನಡೆಸಬೇಕು. ಆಯುಕ್ತರ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಸಚಿವರ ಅಧ್ಯಕ್ಷತೆಯಲ್ಲಿ ಈ ಕುರಿತು ಪರಿಶೀಲಿಸಲಾಗುತ್ತದೆ ಎಂದು ವಿವರಿಸಿದರು.