ರಾಮನಗರ, ನ 30 (DaijiworldNews/HR): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡುತ್ತೇವೆ, ಬಳಿಕ ಎಲ್ಲಾ ಕೇಸ್ ಗಳನ್ನು ಮುಚ್ಚಿಹಾಕಬಹುದೆಂದು ಐದಾರು ತಿಂಗಳು ಮುಂದೂಡ್ತಿದ್ದಾರೆ. ಇದೆಲ್ಲಾ ತಂತ್ರಗಾರಿಕೆಯಷ್ಟೇ. ಅದು ಮುಂದೆ ಏನೇನಾಗುತ್ತದೆಂದು ನೋಡೊಣ ಎಂದರು.
ಇನ್ನು ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸು ತೆಗೆದುಕೊಂಡಿದ್ದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅವರು ದೊಡ್ಡ ವಕೀಲರೆಂದು ಗೊತ್ತು. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ಲವೇ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೋ ಮಾಡಿದರು, ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡರಲ್ಲ. ಆ ರೀತಿಯ ವಕೀಲರು ಇವರು. ಜನಸಾಮಾನ್ಯರಿಗೆ ಒಂದು ನ್ಯಾಯ ಎಂದು ವಾಗ್ದಾಳಿ ನಡೆಸಿದ್ದಾರೆ.