ಶಿವಮೊಗ್ಗ, 30 (DaijiworldNews/AK): ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಶಿಕಾರಿಪುರದ ಕಾಂಗ್ರೆಸ್ ಪುಡಾರಿಗಳ ಆರ್ಭಟ ಸ್ವಲ್ಪ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲಿದೆ. ಆ ಬಳಿಕ ಕಾಂಗ್ರೆಸ್ ಪಕ್ಷದ ಟೈರ್ ಪಂಕ್ಚರ್ ಆಗಿ, ಪುಡಾರಿಗಳ ಪುಂಗಿ ಊದುವುದು ನಿಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಿಕಾರಿಪುರದಲ್ಲಿ ಪಕ್ಷ ಆಯೋಜಿಸಿದ್ದ ನೂತನ ರಾಜ್ಯಾಧ್ಯಕ್ಷರು ಹಾಗೂ ವಿರೋಧಪಕ್ಷ ನಾಯಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆದರೂ, ರಾಜ್ಯ ಸರಕಾರ ಮಲಗಿದೆ ಎಂದು ಟೀಕಿಸಿದರು.
ಅಧಿವೇಶನದಲ್ಲಿ ಸರಕಾರದ ಕಿವಿ ಹಿಂಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಭರವಸೆ ನೀಡಿದರು. ಬರಗಾಲದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು.
ಬಡವರು, ರೈತರು, ಪರಿಶಿಷ್ಟ ಜಾತಿ, ಪಂಗಡದ ಜನರು ಸೇರಿ ಎಲ್ಲರಿಗಾಗಿ ಶ್ರಮಿಸಿದ ಮಾಜಿ ಸಿಎಂ ಯಡಿಯೂರಪ್ಪ ಅವರು ಬಿಜೆಪಿಯನ್ನು ರಾಜ್ಯದ ಮೂಲೆಮೂಲೆಗೆ ಒಯ್ದವರು. 9 ಬಾರಿ ಯಡಿಯೂರಪ್ಪ ಅವರನ್ನು ಶಾಸಕರಾಗಿ ಮಾಡಿದ ಶಿಕಾರಿಪುರದ ಜನತೆಗೆ ಧನ್ಯವಾದಗಳು ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವಂಥದ್ದು. ಕಾರ್ಯಕರ್ತರು ನಾನೇ ರಾಘಣ್ಣ, ನಾನೇ ಯಡಿಯೂರಪ್ಪ ಎಂದು ಭಾವಿಸಿ ಮನೆಮನೆಗೆ ಭೇಟಿ ಕೊಡಿ. ಈ ಮೂಲಕ ದೊಡ್ಡ ಅಂತರದಲ್ಲಿ ಶಿಕಾರಿಪುರದಲ್ಲಿ ಹಾಗೂ ಇತರ ಕಡೆ ಪಕ್ಷದ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.