ಕೊಚ್ಚಿ, ಡಿ 01 (DaijiworldNews/AK): ಇಂದಿನಿಂದ 10 ವರ್ಷಗಳಲ್ಲಿ ಶೇಕಡಾ 50 ರಷ್ಟು ಮಹಿಳಾ ಮುಖ್ಯಮಂತ್ರಿಗಳಾಗುವುದು ಕಾಂಗ್ರೆಸ್ ಪಕ್ಷದ ಪ್ರಮುಖ
ಗುರಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿ ನಡೆಯುತ್ತಿರುವ ಉತ್ಸಾಹ್ ಮಹಿಳಾ ಕಾಂಗ್ರೆಸ್ ರಾಜ್ಯ ಸಮಾವೇಶದಲ್ಲಿ ಮಾತನಾಡಿ, ಇಂದು ನಮ್ಮಪಕ್ಷದಲ್ಲಿ ಮುಖ್ಯಮಂತ್ರಿಯಾಗಿ ಮಹಿಳೆ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ತುಂಬಾ ಒಳ್ಳೆಯ ಮುಖ್ಯಮಂತ್ರಿಯಾಗುವ ಗುಣ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ. ನನಗೆ ತಿಳಿದಿದೆ ಎಂದು ಹೇಳಿದರು.
ಆರ್ ಎಸ್ಎಸ್ ಸಂಪೂರ್ಣವಾಗಿ ಪುರುಷ ಸಂಘಟನೆ. ಆರ್ ಎಸ್ ಎಸ್ ನಲ್ಲಿ ಮಹಿಳೆಯರು ಉನ್ನತ ಸ್ಥಾನಕ್ಕೆ ಏರಲು ಅವಕಾಶವಿಲ್ಲ. ಹೆಂಗಸರು ಅನೇಕ ವಿಧಗಳಲ್ಲಿ ಪುರುಷರಿಗಿಂತ ಶ್ರೇಷ್ಠರು ಎಂದರು.
ಪುರುಷರಿಗಿಂತ ಹೆಚ್ಚು ಮಹಿಳೆಯರು ತಾಳ್ಮೆ ಹೊಂದಿದ್ದಾರೆ. ಅವರು ಪುರುಷರಿಗಿಂತ ದೀರ್ಘಾವಧಿಯ ದೃಷ್ಟಿಯನ್ನು ಹೊಂದಿದ್ದಾರೆ. ಅವರು ಹೆಚ್ಚು ಸಂವೇದನಾಶೀಲರು ಎಂದು ತಿಳಿಸಿದರು.
ಮಹಿಳಾ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ಸಂಸತ್ತಿನಲ್ಲಿ ಒಂದು ದಶಕದ ನಂತರ ಜಾರಿಗೆ ಬರಲಿರುವ ಯಾವುದೇ ಮಸೂದೆಯನ್ನು ನಾನು ಎಂದಿಗೂ ನೋಡಿಲ್ಲ, 10 ವರ್ಷಗಳ ನಂತರ ಬಿಜೆಪಿ ಜಾರಿಗೆ ತರುತ್ತಿರುವ ಏಕೈಕ ಮಸೂದೆಯು ಮಹಿಳಾ ಶಕ್ತಿಗೆ ಸಂಬಂಧಿಸಿದೆ ಎಂದರು.