ವಾರಣಾಸಿ, ಡಿ 02 (DaijiworldNews/AA): ಸೈಕಲ್ ರಿಕ್ಷಾ ಚಾಲಕರೋರ್ವರ ಮಗನಾಗಿ ತನ್ನ 22ನೇ ವಯಸ್ಸಿನಲ್ಲಿ ಯುಪಿಎಸ್ ಸಿ ಪರೀಕ್ಷೆಯನ್ನು 48ನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾಗುವ ಮೂಲಕ ಗೋವಿಂದ್ ಜೈಸ್ವಾಲ್ ಅನೇಕರಿಗೆ ಮಾದರಿಯಾಗಿದ್ದಾರೆ.
ಗೋವಿಂದ್ ಜೈಸ್ವಾಲ್ ಅವರು ತಮ್ಮ 22ನೇ ವಯಸ್ಸಿನಲ್ಲಿ ಯುಪಿಎಸ್ ಸಿ ಪರೀಕ್ಷೆಯನ್ನು ಎದುರಿಸಿದರು. ಅವರ ಕುಟುಂಬ ವಾರಾಣಾಸಿಯಲ್ಲಿ ವಾಸವಾಗಿತ್ತು. ಗೋವಿಂದ್ ಅವರ ತಂದೆ ಮೊದಲು 35 ಸೈಕಲ್ ರಿಕ್ಷಾಗಳನ್ನು ಇಟ್ಟುಕೊಂಡಿದ್ದರು. ಆದರೆ, ಅವರು ತಮ್ಮ ತಾಯಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಅದರಲ್ಲಿ 20 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡುತ್ತಾರೆ.
2004-05ರಲ್ಲಿ ಗೋವಿಂದ್ ಅವರು ಯುಪಿಎಸ್ಸಿ ಓದಲು ದೆಹಲಿಗೆ ತೆರಳುತ್ತಾರೆ. ಇದೇ ವೇಳೆ ತಂದೆ ತನ್ನ ಬಳಿಯಿದ್ದ ಸೈಕಲ್ ಗಳನ್ನು ಮಾರಾಟ ಮಾಡಿರುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದರೂ ತನ್ನ ಮಗನ ಕನಸನ್ನು ನನಸಾಗಿಸುವ ಉದ್ದೇಶದಿಂದ ತಮ್ಮ ಬಳಿ ಉಳಿದಿದ್ದ ಸೈಕಲ್ ಗಳ ಪೈಕಿ 14 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡುತ್ತಾರೆ. ಕೊನೆಗೆ ಉಳಿದ ಒಂದೇ ಒಂದು ಸೈಕಲ್ ನಿಂದ ತಮ್ಮ ಜೀವನ ಸಾಗಿಸಲು ನಿರ್ಧಾರ ಮಾಡುತ್ತಾರೆ.
ಗೋವಿಂದ್ ಅವರ ತಂದೆಯು ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರೂ ತನ್ನ ಹೆಂಡತಿ, ತಾಯಿ, ಮಗನಿಗಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದರು. ತನ್ನ ತಂದೇ ತನಗಾಗಿ ಕಷ್ಟಪಡುತ್ತಿರುವುದನ್ನು ಕಂಡ ಗೋವಿಂದ್ ಛಲಬಿಡದೆ ತನ್ನ ಮೊದಲ ಪ್ರಯತ್ನದಲ್ಲೇ 48ನೇ ರ್ಯಾಂಕ್ ನೊಂದಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಪ್ರಸ್ತುತ ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋವಿಂದ್ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.