ಹಾಸನ , ಡಿ 02 (DaijiworldNews/RA): ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ರಕ್ತದ ಕ್ಯಾನ್ಸರ್ ಗೆ ಬಲಿಯಾದ ಮನಕಲಕುವ ಘಟನೆ ಹಾಸನದಲ್ಲಿ ನಡೆದಿದೆ.
ವಿದ್ಯಾರ್ಥಿನಿ ನೇಹಾ (17) ರಕ್ತದ ಕ್ಯಾನ್ಸರ್ ನಿಂದ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಕಳೆದ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈಕೆ 625ಕ್ಕೆ624 ಅಂಕ ಪಡೆದುಕೊಂಡಿದ್ದಳು.
ಪತ್ರಕರ್ತ ಸೋಮೇಶ್ ಎಂಬವರ ಪುತ್ರಿಯಾಗಿರುವ ನೇಹಾ ವೈದ್ಯೆಯಾಗಬೇಕೆಂಬ ಮಹದಾಸೆ ಹೊಂದಿದ್ದು, ಹಾಲಿ ಬೆಂಗಳೂರಿನ ನಾರಾಯಣ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ನೇಹಾ ಪೋಷಕರು ಸಹ ಮಗಳು ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದರು. ಆದ್ರೆ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ನೇಹಾಳಿಗೆ ಮಾರಕ ಕಾಯಿಲೆಯಾದ ರಕ್ತದ ಕ್ಯಾನ್ಸರ್ ಇತ್ತು ಎನ್ನಲಾಗಿದೆ.
ಇನ್ನು ಇದಕ್ಕಾಗಿ ಆಕೆ ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಕಾಯಿಲೆ ಗಂಭೀರ ಸ್ವರೂಪ ಪಡೆದಿದ್ದು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.
ಶುಕ್ರವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಮೃತದೇಹವನ್ನು ಹಾಸನ ನಿವಾಸಕ್ಕೆ ತಂದು ಬೆಳಗ್ಗೆ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಮಗಳ ಇಚ್ಛೆಯಂತೆ ಸೋಮೇಶ್ ದಂಪತಿ ಹಾಗೂ ಇತರರು ನೇಹಾ ಮೃತದೇಹವನ್ನು ಹಿಮ್ಸ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.