ತೆಲಂಗಾಣ, ಡಿ 3 (DaijiworldNews/SK): ತೆಲಂಗಾಣ ಚುನಾವಣಾ ಪ್ರಕ್ರಿಯೆ ಮುಗಿಯದಿದ್ದರೂ ಮತ್ತು ಫಲಿತಾಂಶ ಪ್ರಕಟವಾಗುವ ಮೊದಲೇ ಒಂದು ಪಕ್ಷದ ವ್ಯಕ್ತಿಯನ್ನು ಭೇಟಿ ಮಾಡಿ ಶುಭ ಕೋರಿದ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆ ತಿಳಿಸಿದೆ.
ತೆಲಂಗಾಣದ ಡಿಜಿ ಮತ್ತು ಐಜಿ ಆಗಿರುವ ಅಂಜನಿ ಕುಮಾರ್ ಹಾಗು ಪೊಲೀಸ್ ಅಧಿಕಾರಿಗಳಾದ ಸಂಜಯ್ ಜೈನ್ ಮತ್ತು ಮಹೇಶ್ ಭಗವತ್ ಈ ಮೂವರುಗಳು ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹಾಗೂ ಚುನಾವಣೆ ಅಭ್ಯರ್ಥಿ ರೇವಂತ್ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.
ಈ ಕುರಿತಾದ ಫೋಟೋ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತು ಕೊಂಡ ಚುನಾವಣಾ ಆಯೋಗ ಸಮಿತಿ, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆರೋಪವನ್ನು ಹೊರಿಸಿ ಅಂಜನಿ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.