ಬೆಳಗಾವಿ, ಡಿ 4 (DaijiworldNews/MR): ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ 12ನೇ ಅಧಿವೇಶನ ಶುರುವಾಗಲಿದೆ. ಅಧಿವೇಶಕ್ಕೆ ಬೇಕಾದ ಸಿದ್ದತೆಯನ್ನ ಬೆಳಗಾವಿ ಜಿಲ್ಲಾಡಳಿತ ಕಳೆದ ಒಂದು ತಿಂಗಳಿಂದ ಮಾಡಿಕೊಂಡು ಬಂದಿದ್ದು, ಸ್ವಚ್ಛತೆಯಿಂದ ಹಿಡಿದು ಲೈಟಿಂಗ್ ವ್ಯವಸ್ಥೆ, ಸಚಿವರಿಗೆ ಕೊಠಡಿ ಹಂಚಿಕೆ ಎಲ್ಲವೂ ಕೂಡ ಆಗಿದ್ದು ಇಂದು 11 ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ.
ಇನ್ನೂ ಸುವರ್ಣ ವಿಧಾನಸೌಧದಲ್ಲಿ ನಾಲ್ಕು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಸೌಧದ ಸುತ್ತಮುತ್ತ ಪಾರ್ಕಿಂಕ್ ವ್ಯವಸ್ಥೆ ಮಾಡಲಾಗಿದೆ. ಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಾಲು ಸಾಲು ಪ್ರತಿಭಟನೆಗಳು ಹಮ್ಮಿಕೊಂಡಿರುವುದರಿಂದ ಭದ್ರತೆಗೆ 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ನೇತೃತ್ವದಲ್ಲಿ ಭದ್ರತಾ ತಂಡವನ್ನು ನಿಯೋಜಿಸಲಾಗಿದೆ.
ಒಟ್ಟು 9 ಐಪಿಎಸ್ ದರ್ಜೆ, 12 ಹೆಚ್ಚುವರಿ ಎಸ್ಪಿ, 37 ಡಿವೈಎಸ್ಪಿ, 92 ಪಿಐ , 219 ಪಿಎಸ್ ಐ, 366 ಎಎಸ್ ಐ, 3 ಸಾವಿರ ಪೊಲೀಸ್ ಕಾನ್ಸ್ಟೇಬಲ್, 200 ಹೋಮ್ ಗಾರ್ಡ್ಸ್, 35 ಕೆಎಸ್ ಆರ್ ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 2 ಸಾವಿರ ಪೊಲೀಸ್ ಸಿಬ್ಬಂದಿ ವಾಸ್ತವ್ಯಕ್ಕೆ ಸುವರ್ಣ ಸೌಧ ಸಮೀಪದಲ್ಲೇ ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದ್ದು, ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.