ಹೈದರಾಬಾದ್, ಡಿ 04 (DaijiworldNews/MS): "ತೆಲಂಗಾಣದ ನೂತನ ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷರ ತೀರ್ಮಾನಕ್ಕೆ ಬಿಡಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು" ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ತೆಲಂಗಾಣದಲ್ಲಿ ಸಿಎಲ್ ಪಿ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು "ಇಂದಿನ ಸಭೆಯಲ್ಲಿ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಸಿಎಂ ಆಯ್ಕೆ ತೀರ್ಮಾನವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಬಿಡುವ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಶಾಸಕರು ಒಮ್ಮತದಿಂದ ಒಪ್ಪಿದರು. ಇದರ ಜೊತೆಗೆ ಎಲ್ಲಾ 64 ಶಾಸಕರ ಜೊತೆಗೆ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ನಮಗೆ ಬೇರೆ ಪಕ್ಷಗಳ ಶಾಸಕರ ಬೆಂಬಲದ ಅಗತ್ಯವಿಲ್ಲ. ತೆಲಂಗಾಣದ ಜನ ನಮಗೆ ಸಂಪೂರ್ಣ ಬಹುಮತ ನೀಡಿದ್ದು, ನಮ್ಮ ಆಶ್ವಾಸನೆಗಳನ್ನು ಆದಷ್ಟು ಬೇಗ ಜಾರಿಗೊಳಿಸುವ ವಿಚಾರವಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ."
ನಿಮ್ಮನ್ನು ಗೇಮ್ ಚೇಂಜರ್ ಎಂದು ಪರಿಗಣಿಸಲಾಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಪಾಲಿಗೆ ಗೇಮ್ ಚೇಂಜರ್ ಯಾರು ಎಂದು ಕೇಳಿದಾಗ, "ನಾನು ಯಾವುದೇ ಗೇಮ್ ಚೇಂಜರ್ ಅಲ್ಲ. ತೆಲಂಗಾಣ ರಾಜ್ಯದ ಜನ ನಿಜವಾದ ಗೇಮ್ ಚೇಂಜರ್ ಗಳು. ಬದಲಾವಣೆ ಬಯಸಿದ ಮತದಾರರು ಹಾಗೂ ನಾಯಕರು ತೆಲಂಗಾಣದಲ್ಲಿ ಈ ಬದಲಾವಣೆ ತಂದಿದ್ದಾರೆ" ಎಂದು ತಿಳಿಸಿದರು.
ದಿಲ್ಲಿಗೆ ಡಿಸಿಎಂ ಡಿ ಕೆ ಶಿವಕುಮಾರ್:
ತೆಲಂಗಾಣದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ ರಾವ್ ಥಾಕೂರ್, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ರಾತ್ರಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಹೈ ಕಮಾಂಡ್ ನಾಯಕರನ್ನು ಭೇಟಿ ಮಾಡಿ, ತೆಲಂಗಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಶಾಸಕರ ಜತೆಗಿನ ಪ್ರತ್ಯೇಕ ಮಾತುಕತೆ ಬಗ್ಗೆ ವಿವರಗಳನ್ನು ಸಲ್ಲಿಸಲಿದ್ದಾರೆ.