ಹಾಸನ, ಡಿ 05 (DaijiworldNews/PC): ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತು ತನ್ನದೇ ಆದ ಛಾಪು ಮೂಡಿಸಿದ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತಿ ಪಡೆದಿದ್ದ ಅರ್ಜುನ ಎಂಬ ಆನೆ ಒಂಟಿ ಸಲಗದ ಜತೆ ಹೋರಾಡಿ ಮೃತಪಟ್ಟಿದ್ದು ಇಂದು ಅರ್ಜುನನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿ ಅಂತ್ಯಕ್ರಿಯೆ ನಡೆಸಲಾಯಿತು.ಅರ್ಜುನನ ಕಳೆಬರಕ್ಕೆ ಮೈಸೂರು ರಾಜಮನೆತನದ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು.
ಬಳಿಕ ಜಿಲ್ಲಾಡಳಿತದಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಮಾವುತ ವಿನು, ಕಾವಾಡಿಗ ಪ್ರೀತಿಯ ಆನೆಗೆ ಕಣ್ಣೀರಿಡುತ್ತಲೇ ಪೂಜೆ ಮಾಡುವ ಮೂಲಕ ನಮನವನ್ನು ಸಲ್ಲಿಸಿದ್ದರು.
ಪೂಜೆ ಎಲ್ಲಾ ಮುಗಿದ ಮೇಲೆ ಜೆಸಿಬಿಯಿಂದ 15 ಅಡಿಗಳ ಆಳದವರೆಗೆ ಗುಂಡಿ ತೋಡಿ ಅಲ್ಲಿದ್ದ ಜನರು ಸಮಾಧಿಗೆ ಉಪ್ಪು, ಸುಣ್ಣ, ಬ್ಲೀಚಿಂಗ್ ಪೌಡರ್ ಹಾಕಿದರು. ಬಳಿಕ ಜೆಸಿಬಿ ಸಹಾಯದಿಂದ ಮೃತದೇಹವನ್ನು ಸಮಾಧಿಗೆ ಇಳಿಸಿ ಮಣ್ಣು ಮುಚ್ಚಲಾಯಿತು.