ಬೆಂಗಳೂರು, ಡಿ 06 (DaijiworldNews/MR): ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಹೆಲ್ತ್ ಕಾರ್ಡ್ಗಳನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.
ಈಗಾಗಲೇ ಇದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ಗಳನ್ನು, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಎಂದು ಹೆಸರಿಸಲಾಗಿದೆ.
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ನಲ್ಲಿ ಕೆಲ ಬದಲಾವಣೆ ತರಲಾಗಿದ್ದು, ರಾಜ್ಯದ 5.9 ಕೋಟಿ ಜನರಿಗೆ ಹೆಲ್ತ್ ಕಾರ್ಡ್ಗಳನ್ನು ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಚಿಕಿತ್ಸೆಗಳನ್ನು ಒದಗಿಸಬೇಕು ಎಂಬುದು ನಮ್ಮ ಸರ್ಕಾರದ ಆದ್ಯತೆಗಳಲ್ಲಿ ಒಂದು ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್ಗೆ ನೂತನ ಹೆಲ್ತ್ ಕಾರ್ಡ್ಗಳನ್ನು ಸಂಯೋಜನೆಗೊಳಿಸಲಾಗಿದ್ದು, ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್ನ ಅಡಿ ಚಿಕಿತ್ಸೆ ಪಡೆಯಬಹುದಾಗಿದೆ.
ರಾಜ್ಯದಲ್ಲಿರುವ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ ಮುಂದಿನ 6 ತಿಂಗಳ ಒಳಗಾಗಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ಸೃಜನೆ ಮತ್ತು ವಿತರಣಾ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇ.66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡುತ್ತಿದೆ. ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು ಬಳಸಿಕೊಳ್ಳಬಹುದು.
ಎಪಿಎಲ್ ಕುಟುಂಬದವರಿಗೂ ಸಹ ಯೋಜನೆಯಲ್ಲಿ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಎಪಿಎಲ್ ಕುಟುಂಬಗಳಿಗೆ 5 ಲಕ್ಷದ ರೂ. ಮೌಲ್ಯದ ಚಿಕಿತ್ಸೆಯಲ್ಲಿ ಗರಿಷ್ಠ 1.5 ರೂ. ಲಕ್ಷ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿಸಲಿದೆ. ಎಪಿಎಲ್ ಕಾರ್ಡುದಾರರು ಶೇ. 70 ರಷ್ಟು ಚಿಕಿತ್ಸಾ ವೆಚ್ಚವನ್ನು ಪಾವತಿಸಿದರೆ, ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು.