ನವದೆಹಲಿ, ಡಿ 07 (DaijiworldNews/MR): 2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿ ದೆಹಲಿಯ ಇಶಿತಾ ಕಿಶೋರ್ ಎಂಬುವವರು ದೇಶದ ಗಮನ ಸೆಳೆದಿದ್ದರು. ಆದರೆ ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಇಶಿತಾ ವಿಫಲವಾಗಿದ್ದು, ಛಲ ಬಿಡದೆ UPSC ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಯಶಸ್ಸು ಕಂಡರು.
ಎರಡು ಬಾರಿ ಪ್ರಿಲಿಮ್ಸ್ ಕೂಡಾ ಪಾಸ್ ಮಾಡಲು ಸಾಧ್ಯವಾಗಿರದ ಇಶಿತಾ ಇಂದು ಬಹಳಷ್ಟು ಜನಕ್ಕೆ ಸ್ಪೂರ್ತಿಯಾಗಿದ್ದಾರೆ. ಇಶಿತಾ ಅವರು ಮೂಲತಃ ದೆಹಲಿಯವರು. ತನ್ನ ಶಾಲಾ ಶಿಕ್ಷಣವನ್ನು ನವದೆಹಲಿಯ ಬಾಲ್ ಭಾರತಿ ಏರ್ ಫೋರ್ಸ್ ಸ್ಕೂಲ್ನಲ್ಲಿ ಪಡೆದರು. ಅಂತರರಾಷ್ಟ್ರೀಯ ಇಂಟರ್-ಸ್ಕೂಲ್ ಫುಟ್ಬಾಲ್ ಪಂದ್ಯಾವಳಿಯಾದ ಸುಬೊಟೊ ಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಇಶಿತಾ ಅವರು ಒಳ್ಳೆಯ ಕ್ರೀಡಾಪಟು ಆಗಿದ್ದರು.
ಸಕ್ರಿಯ ಕ್ರೀಡಾಪಟುವಾಗಿದ್ದ ಇಶಿತಾ ತನ್ನ ಶಾಲಾ ದಿನಗಳಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು . ದೆಹಲಿ ವಿಶ್ವವಿದ್ಯಾಲಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ 2017 ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಬಹು-ರಾಷ್ಟ್ರೀಯ ಸೇವೆಗಳ ಪಾಲುದಾರಿಕೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
2017 ಹಾಗೂ 2019 ರಲ್ಲಿ ಎರಡು ಬಾರಿ ಯುಪಿಎಸ್ ಸಿ ಎದುರಿಸಿದರು. ಆದರೆ ಪ್ರಿಲಿಮ್ಸ್ ಕೂಡಾ ಪಾಸ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಎದೆಗುಂದದೆ ಸತತ ಪರಿಶ್ರಮದಿಂದ ತನ್ನ ಮೂರನೇ ಪ್ರಯತ್ನದಲ್ಲಿ ಸಂದರ್ಶನ ಎದುರಿಸಿ ಟಾಪರ್ ಆಗಿ ಯುಪಿಎಸ್ಸಿ ಪರೀಕ್ಷೆ ಎದುರಿಸುವ ಯುವಕರಿಗೆ ಮಾದರಿಯಾದರು.