ತಿರುವನಂತಪುರ, ಡಿ 07 (DaijiworldNews/MS): ವರದಕ್ಷಿಣೆ ಕಾರಣಕ್ಕಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಶಹನಾ(26) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಡಾ. ರುವೈಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ರುವೈಸ್ ಅವರನ್ನು ಕರುನಾಗಪಲ್ಲಿಯಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿದೆ.
ಡಾ. ರುವೈಸ್ ಶಹನಾಳನ್ನು ಪ್ರೀತಿಸಿ ಬಳಿಕ ಅಪಾರ ವರದಕ್ಷಿಣೆಗೆ ಬೇಡಿಕೆ ಇಟ್ಟು ಮದುವೆಯಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ಶಹನಾಳ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಈಗಾಗಲೇ ರುವೈಸ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದು ವೈದ್ಯೆಯಾಗಿ ಸಾಧನೆ ಮಾಡಿದ ಶಹನಾ ಬದುಕು ಅರ್ಧದಲ್ಲೇ ಕೊನೆಗೊಳ್ಳಲು ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಕಾರಣ ಎಂಬುದನ್ನು ಪೊಲೀಸರೂ ದೃಢಪಡಿಸುತ್ತಿದ್ದಾರೆ. 26ರ ಹರೆಯದ ಶಹನಾ ಹತಾಶೆಯಿಂದ ಚುಚ್ಚುಮದ್ದು ಹಾಕಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಹಾಗೂ ಸಹೋದರಿ ಹೇಳಿಕೆ ನೀಡಿದ್ದಾರೆ.
ಪಿಜಿ ವೈದ್ಯರ ಸಂಘದ ರಾಜ್ಯ ನಾಯಕನಾಗಿದ್ದ ಡಾ. ರುವೈಸ್ ವರದಕ್ಷಿಣೆ ಕೇಳಿದ ವಾಟ್ಸ್ಆ್ಯಪ್ ಚಾಟ್ಗಳನ್ನು ನಾಶಪಡಿಸಿದ್ದು, ವಿವಾಹವಾಗಲು 150 ಪವನ್ ಚಿನ್ನ, 15 ಎಕರೆ ಜಮೀನು ಮತ್ತು ಬಿಎಂಡಬ್ಲ್ಯು ಕಾರು ಡಿಮ್ಯಾಂಡ್ ಮಾಡಿದ್ದ. ಡಾ ರುವೈಸ್ ಫೋನ್ನಲ್ಲಿ ಡಿಲೀಟ್ ಮಾಡಿದ ಡಾ ಶಹಾನಾ ಆತ್ಮಹತ್ಯೆ ಸಂದೇಶಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ ಎನ್ನಲಾಗಿದೆ.