ಬೆಳಗಾವಿ, ಡಿ 07 (DaijiworldNews/PC): ರಾಜ್ಯದ ಸುವರ್ಣ ಸೌಧದಲ್ಲಿರುವ ಸಾವರ್ಕರ್ ಫೋಟೋ ತೆರವುಗೊಳಿಸುವ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 19 ರಂದು ಅಂದಿನ ಬಿಜೆಪಿ ಸರ್ಕಾರ ವೀರ ಸಾವರ್ಕರ್ ಪೋಟೋ ಅನಾವರಣಗೊಳಿಸಿತ್ತು.
ಈ ಪೋಟೋ ವನ್ನು ತೆಗೆಯುವ ಬಗ್ಗೆ ವಿವಿಧ ರೀತಿಯಲ್ಲಿ ವದಂತಿ ಹಬ್ಬಿದ್ದು ಈ ಬಗ್ಗೆ ಮಾತನಾಡಿದ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ವೀರ ಸಾವರ್ಕರ್ ಅವರ ಭಾವಚಿತ್ರ ತೆರವು ಮಾಡುವ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಸಾವರ್ಕರ್ ಫೋಟೊ ಸಾವರ್ಕರ್ ಭಾವಚಿತ್ರ ತೆಗೆಯಬೇಕೇ ಎಂಬ ಬಗ್ಗೆ ಸ್ಪೀಕರ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಸಾವರ್ಕರ್ ಭಾವಚಿತ್ರ ತೆರವುಗೊಳಿಸಬೇಕು ಎಂದು ಕಾಂಗ್ರೆಸ್ನ ಹಲವು ನಾಯಕರಿಂದ ಆಗ್ರಹ ವ್ಯಕ್ತವಾಗಿತ್ತು.
ಈ ಬೆನ್ನಲೇ ಮಾಹಿತಿ ನೀಡಿದ ಯು ಟಿ ಖಾದರ್ ಸಂವಿಧಾನ ಬದ್ಧವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ನನಗೆ ಸಚಿವರೂ ಒಂದೇ, ಪ್ರತಿಪಕ್ಷದವರೂ ಒಂದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಹೇಳಿಕೆ ನೀಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ವಿಚಾರವಿದ್ದರೂ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುವೆ ಎಂದು ಖಾದರ್ ಹೇಳಿದ್ದಾರೆ.