ಬೆಳಗಾವಿ, ಡಿ 07 (DaijiworldNews/MS): ವಿಕಲ ಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಬೇಡಿಕೆಗಳನ್ನು ಸಾಧ್ಯವಾದಷ್ಟು ಬರುವ ಬಜೆಟ್ ನಲ್ಲಿ ಈಡೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಬೆಳಗಾವಿ ಸುವರ್ಣಸೌಧದ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ನಿಮ್ಮ ಸಹೋದರಿಯಾಗಿ ನಿಮ್ಮ ಜೊತೆ ನಾನಿರುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೆರಿಸಲು ಸತತವಾಗಿ ಪ್ರಯತ್ನಿಸುತ್ತೇನೆ. ನಿಮ್ಮ ಬೆಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. 2024ರ ಬಜೆಟ್ ನಲ್ಲಿ ನಿಮ್ಮ ಬೇಡಿಕೆಗಳಲ್ಲಿ ಕನಿಷ್ಠ 2-3 ಬೇಡಿಕೆ ಈಡೇರಿಸಲು ಯತ್ನಿಸುತ್ತೇನೆ. ಕೇವಲ ಭಾಷಣಕ್ಕೆ ಸೀಮಿತವಾಗದೇ ನಿಜವಾದ ಕಾಳಜಿಯಿಂದ ಒಡಹುಟ್ಟಿದವರು ಎಂದು ತಿಳಿದು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಫೆಬ್ರುವರಿಯಲ್ಲಿ ವಿಕಲಚೇತನರ ಒಕ್ಕೂಟದ ಪ್ರಮುಖ ಪದಾಧಿಕಾರಿಗಳನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಬೇಡಿಕೆಗಳನ್ನು ಮಂಡಿಸಲು ಅವಕಾಶವನ್ನು ಮಾಡಿಕೊಡುತ್ತೇನೆ. ಹಾಗಾಗಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಸಚಿವರು ವಿನಂತಿಸಿದರು.
ಸಚಿವರ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲು ನೌಕರರು ಸಮ್ಮತಿಸಿದರು.