ಭೋಪಾಲ್, ಡಿ 08 (DaijiworldNews/AA): ಕಾರು ಖರೀದಿಸುವಷ್ಟು ಹಣವಿಲ್ಲವೆಂದು ನೂತನ ಶಾಸಕರೊಬ್ಬರು ಬೈಕ್ ನಲ್ಲಿ ಸದನಕ್ಕೆ ತೆರಳಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಬೈಕ್ ನಲ್ಲಿ ಶಾಸಕರು ಸದನಕ್ಕೆ ತೆರಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ್ ಆದಿವಾಸಿ ಪಾರ್ಟಿ (ಬಿಎಪಿ)ಯ ನೂತನ ಶಾಸಕ ಕಮಲೇಶ್ವರ ದೊಡಿಯಾರ್ ಅವರಿಗೆ ಕಾರು ಖರೀದಿ ಮಾಡುವಷ್ಟು ಸಾಮರ್ಥ್ಯವಿಲ್ಲ. ಆದ್ದರಿಂದ ಬೈಕ್ ನಲ್ಲೇ ಸದನಕ್ಕೆ ತೆರಳಿದ್ದಾರೆ.
ಶಾಸಕ ದೊಡಿಯಾರ್ ಅವರು ಮಧ್ಯಪ್ರದೇಶ ವಿಧಾನಸಭೆಗೆ ನ. 17 ರಂದು ನಡೆದ ಚುನಾವಣೆಯಲ್ಲಿ ರತ್ನಂ ಜಿಲ್ಲೆಯ ಸೈಲಾನಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಗೊಂಡಿರುತ್ತಾರೆ. ಆ ಬಳಿಕ ರಾಜಧಾನಿ ಭೋಪಾಲ್ ಗೆ ತೆರಳಲು ಕಾರಿನ ವ್ಯವಸ್ಥೆ ಮಾಡಲು ಪ್ರಯತ್ನಿಸಿ, ವಿಫಲರಾದರು. ನಂತರ ಅವರು ತಮ್ಮ ಸೋದರ ಮಾವನ ಬೈಕನ್ನು ಎರವಲು ಪಡೆದು, ಅದರ ಮೇಲೆ "ಎಂಎಲ್ಎ" ಎಂಬ ಸ್ಟಿಕರ್ ಅಂಟಿಸಿ ಸಹವರ್ತಿಯೊಂದಿಗೆ 330 ಕಿಮೀ ಪ್ರಯಾಣಸಿ ಭೋಪಾಲ್ ತಲುಪಿರುತ್ತಾರೆ.
ರಾಜಧಾನಿ ಭೋಪಾಲ್ ತಲುಪಿದ ಬಳಿಕ ದೊಡಿಯಾರ್ ಎಂಎಲ್ಎ ರೆಸ್ಟ್ಹೌಸ್ನಲ್ಲಿ ಉಳಿದಿದ್ದಾರೆ. ನಂತರ ಗುರುವಾರ ವಿಧಾನಸಭೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕರಾಗಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.