ಬೆಂಗಳೂರು, ಡಿ 10 (DaijiworldNews/SK): ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ಮೇಳ ಪ್ರದರ್ಶನಕ್ಕೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ವಿಧಿಸಿದ್ದ ’ಸಮಯದ ’ ನಿರ್ಬಂಧವನ್ನು ಹೈಕೋರ್ಟ್ ಹಿಂತೆಗೆದುಕೊಂಡಿದೆ.
ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದಂತೆ ಪ್ರಾಯೋಗಿಕವಾಗಿ ಕಟೀಲು ಮೇಳದಲ್ಲಿ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನಡೆದಿತ್ತು. ಈ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಭಕ್ತರಿಂದ ಭಾರಿ ವಿರೋಧ ಕೂಡ ವ್ಯಕ್ತವಾಗಿದ್ದು, ಈ ಹಿಂದಿನಂತೆಯೇ ಯಕ್ಷಗಾನ ಪ್ರದರ್ಶನ ಮುಂದುವರಿಸಲು ಆಗ್ರಹಿಸಿದ್ದರು.
ಇದರಂತೆ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಭಕ್ತಾದಿ ಕೃಷ್ಣಕುಮಾರ್ ಅವರು 2022 ರ ನವೆಂಬರ್ 5 ರಂದು ಮಂಗಳೂರು ಜಿಲ್ಲಾಧಿಕಾರಿಗಳು ಮತ್ತು ಇತರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ನಿರ್ಬಂಧ ಹಿಂತೆಗೆದುಕೊಂಡು ಕ್ಷೇತ್ರದಲ್ಲಿ ಸಂಜೆ 5ರಿಂದ ಮಧ್ಯರಾತ್ರಿ 12.30ರವರೆಗೆ ಯಕ್ಷಗಾನ ಮೇಳ ಪ್ರದರ್ಶನ ನಡೆಸಲು ಅವಕಾಶ ನೀಡಿದ್ದಾರೆ.
ಇನ್ನು ಯಕ್ಷಗಾನ ನಡೆಸಲು ಶರತ್ತುಗಳನ್ನು ಹೊರಡಿಸಲಾಗಿದ್ದು, ಕೋವಿಡ್ -19 ಪ್ರಾರಂಭವಾಗುವ ಮೊದಲು ಚಾಲ್ತಿಯಲ್ಲಿದ್ದಂತೆ ಯಕ್ಷಗಾನವನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಪ್ರದರ್ಶನದಿಂದ ಉಂಟಾಗುವ ಶಬ್ದ ಮಾಲಿನ್ಯ ಹಾಗೂ ಆದರಿಂದ ಉತ್ಪತ್ತಿಯಾಗುವ ಶಬ್ದವನ್ನು ನಿಯಂತ್ರಿಸಲು 2000 ರ ಅಡಿಯಲ್ಲಿ ಅನುಮತಿಸಲಾದ ಡೆಸಿಬಲ್ಗಳನ್ನು ಬಳಸಲು ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಒಪ್ಪಂದವನ್ನು ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ನ್ಯಾಯಾಲಯ ಎಚ್ಚರಿಕೆ ನೀಡಿದೆ.