ಕೇರಳ, ಡಿ 11 (DaijiworldNews/AA): ನಮ್ಮ ಸಾಧನೆಗೆ ಎಷ್ಟೇ ಅಡೆತಡೆಗಳು ಬಂದರೂ ಅವುಗಳನ್ನೆಲ್ಲಾ ಎದುರಿಸಿ ಗುರಿ ಸಾಧಿಸಿಸುವ ಚಲವನ್ನು ಹೊಂದಿರಬೇಕು. ಇಂತಹವರಲ್ಲಿ ಕೇರಳ ವಯನಾಡ್ ಜಿಲ್ಲೆಯ ಕುರಿಚಿಯ ಬುಡಕಟ್ಟಿಗೆ ಸೇರಿದವರಾದ ಶ್ರೀಧನ್ಯಾ ಕೂಡ ಒಬ್ಬರು. ಇವರ ಯಶೋಗಾಥೆ ಇಲ್ಲಿದೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನಂತರ ಕೋಝಿಕೋಡ್ನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರವನ್ನು ಅಧ್ಯಯನ ಮಾಡಿದರು. ಪದವಿ ಶಿಕ್ಷಣ ಮುಗಿದ ಬಳಿಕ, ಶ್ರೀಧನ್ಯ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶ್ರೀಧನ್ಯಾ ಅವರು ಶಿಕ್ಷಣದಲ್ಲಿ ಎಷ್ಟೇ ಚುರುಕಾಗಿದ್ದರೂ ಸಹ ಆರ್ಥಿಕ ಸಂಕಷ್ಟ ಅವರನ್ನು ಕಾಡುತ್ತಿತ್ತು.
ಶ್ರೀಧನ್ಯಾ ಅವರು ತಮ್ಮ ಸ್ನಾತಕೋತ್ತರ ಪದವಿ ಮುಗಿದ ಬಳಿಕ ಕೇರಳ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ತಮ್ಮ ಆದಾಯ ಹೆಚ್ಚಿಗೆ ಮಾಡಿಕೊಳ್ಳಲು ಬುಡಕಟ್ಟು ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ವಾರ್ಡನ್ ಆಗಿಯೂ ಕೆಲಸ ನಿರ್ವಹಿಸುತ್ತಾರೆ.
ಶ್ರೀಧನ್ಯಾ ಅವರು ಸರ್ಕಾರಿ ಕೆಲಸದಲ್ಲಿದ್ದರೂ, ಅವರ ಮನಸ್ಸಿಗೆ ಸಮಧಾನವೇ ಇರಲಿಲ್ಲ. ಈ ಮಧ್ಯೆ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಅವರಿಗೆ ಉಂಟಾಗುತ್ತದೆ. ಬಳಿಕ ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯಲು ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಾರೆ.
ಇನ್ನು 2018 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದು ಶ್ರೀಧನ್ಯಾ ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಬಳಿಕ ದೆಹಲಿಯಲ್ಲಿ ನಡೆಯುವ ಅಂತಿಮ ಹಂತದ ಸಂದರ್ಶನಕ್ಕೆ ತೆರಳಲು ಹಣ ಇರುವುದಿಲ್ಲ. ಕೊನೆಗೆ ಅವರ ಸ್ನೇಹಿತರು ಹಣವನ್ನು ಹೊಂದಿಸಿ ದೆಹಲಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ತನ್ನ ಕಷ್ಟಗಳನ್ನು ಮೆಟ್ಟಿ ನಿಂತು ಸಂದರ್ಶನದಲ್ಲಿ ಉತ್ತೀರ್ಣರಾಗುವ ಮೂಲಕ ಕೇರಳದ ಮೊದಲ ಬುಡಕಟ್ಟು ಮಹಿಳಾ ಐಎಎಸ್ ಅಧಿಕಾರಿಯಾದವರು.