ಡಿ 12 (DaijiworldNews/SK): ವೈದ್ಯ ವೃತ್ತಿಯನ್ನು ತ್ಯಜಿಸಿ ರಾಷ್ಟ್ರ ಸೇವೆಗಾಗಿ ನಿಂತ ಸಿದಾನಾ ತಮ್ಮ ಮದುವೆಗೆ ಕೇವಲ 500 ರೂ. ಖರ್ಚು ಮಾಡಿ ಹಲವರಿಗೆ ಮಾದರಿಯಾದವರು.
ಪ್ರಸ್ತುತ ಮಧ್ಯಪ್ರದೇಶದ ಮಂಡ್ಲಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸಲೋನಿ ಸಿದಾನಾ ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 2014 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 74 ನೇ ರ್ಯಾಂಕ್ ಗಳಿಸಿದವರು. ಸಲೋನಿ ಪಂಜಾಬ್ ನ ಜಲಾಲಾಬಾದ್ ಪ್ರದೇಶದ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಸಲೋನಿ ಅವರಿಗೆ ಐಎಎಸ್ ಅಧಿಕಾರಿಯಾಗುವುದು ಅವರ ಜೀವನದ ಕನಸಾಗಿರಲಿಲ್ಲ. ಆದರೆ ವೈದ್ಯೆಯಿಂದ ಐಎಎಸ್ ಅಧಿಕಾರಿಯವರೆಗಿನ ಅವರ ಪ್ರಯಾಣವು ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕ ಮಾರ್ಗಸೂಚಿಯಂತೆ ನಿಲ್ಲುತ್ತದೆ.
ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ 2012 ರಲ್ಲಿ ತಮ್ಮ MBBS ವ್ಯಾಸಂಗ ಮಾಡಿದ ಅವರಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶವಿದ್ದರೂ, UPSC ಪರೀಕ್ಷೆಯನ್ನು ಎದುರಿಸುವಂತೆ ಅವರ ತಂದೆಯ ಸಲಹೆಯ ಮೇರೆಗೆ ಅವರು ಭಾರತದಲ್ಲಿಯೇ ಇರಲು ನಿರ್ಧರಿಸಿದರು.
ನಂತರ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದ ಅವರು, ಗ್ರಂಥಾಲಯದಲ್ಲಿ ಹೆಚ್ಚಾಗಿ ತಮ್ಮ ಸಮಯ ಕಳೆಯತೊಡಗಿದರು. ಸಿದಾನ ಅವರ ಒಂದು ವರ್ಷದ ಕಠಿಣ ಅಧ್ಯಯನ ಫಲವಾಗಿ UPSC ಪರೀಕ್ಷೆಯಲ್ಲಿ 74 ನೇ ರ್ಯಾಂಕ್ನೊಂದಿಗೆ ತನ್ನ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾದರು.
ಸಲೋನಿ ಐಎಎಸ್ ಅಧಿಕಾರಿಯಾಗಿದ್ದರು, ಆಡಂಬರವಾಗಿ ವಿವಾಹವಾಗದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ 500 ರೂ. ನ್ಯಾಯಾಲಯ ಶುಲ್ಕ ಪಾವತಿಸಿ ಸರಳವಾಗಿ ವಿವಾಹವಾಗಿ ಮಾದರಿಯಾದವರು. ಮಾತ್ರವಲ್ಲದೇ ಸಿದಾನಾ ವೈಯಕ್ತಿಕ ಜೀವನದ ಸಂತೋಷವನ್ನು ಬದಿಗಿಟ್ಟು ವಿವಾಹವಾದ 2 ನೇ ದಿನಕ್ಕೆ ಕರ್ತ್ಯವಕ್ಕೆ ಹಾಜರಾಗುವ ಮೂಲಕ ಓರ್ವ ಸರಕಾರಿ ಅಧಿಕಾರಿಯ ಕರ್ತವ್ಯ ಪ್ರಜ್ಞೆ ಮೆರೆದವರು.