ಬೆಂಗಳೂರು,ಡಿ 12 (DaijiworldNews/SK): ಹೊಸ ವರ್ಷ ಸಮೀಸುತ್ತಿದ್ದಂತೆ, ಮೋಜು- ಮಸ್ತಿ, ಪಾರ್ಟಿ ಮಾಡುವತ್ತ ಯುವಜನತೆ ತಯಾರಾಗುತ್ತಿದ್ದು, ಇಂತಹ ಪಾರ್ಟಿಗಳಿಗೆ ಕೆಲವೊಮ್ಮೆ ಮಾದಕ ವಸ್ತುವಿನ ನಂಟು ಇರುತ್ತದೆ. ಈ ನಡುವೆ ನ್ಯೂ ಇಯರ್ ಪಾರ್ಟಿಯನ್ನೇ ಟಾರ್ಗ್ ಟ್ ಮಾಡಿ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಓಕ್ವುಡಿಲಿ ಎಂದು ಗುರುತಿಸಲಾಗಿದೆ. ಈತ ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದಿದ್ದ.
ಆರೋಪಿ ಹೊಸ ವರ್ಷದ ಹಿನ್ನಲೆಯಲ್ಲಿ ಲಾಭಗಳಿಸುವ ಉದ್ದೇಶದಿಂದಲೇ ಆಫ್ರಿಕಾದಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಬೆಡ್ಶೀಟ್ ಕವರ್, ಸೋಪ್ ಬಾಕ್ಸ್ ಹಾಗೂ ಚಾಕೊಲೇಟ್ ಬಾಕ್ಸ್ನಲ್ಲಿ ಕಳ್ಳ ಸಾಗಣಿ ಮಾಡಿ ತಂದಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಒಟ್ಟು 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.