ಬೆಳಗಾವಿ, ಡಿ13 (DaijiworldNews/AK): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯವಾದುದು ಮಾತ್ರವಲ್ಲ ಅತ್ಯಂತ ಆಘಾತಕಾರಿಯಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಕಾ ಹೇಳಿಕೆ ಪ್ರಕಟಿಸಿದ ಅವರು, ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಈ ಬಗ್ಗೆ ನಿಷ್ಪಕ್ಷ ಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರ, ಬಹಳ ಪ್ರಮುಖವಾಗಿ ದೇಶದ ಗೃಹ ಸಚಿವರ ಕರ್ತವ್ಯವಾಗಿದೆ ಎಂದರು.
ಇಪ್ಪತ್ತೆರಡು ವರ್ಷಗಳ ಹಿಂದೆ (13-12-2001) ಸಂಸತ್ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಯ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ ಇದರ ಹಿಂದೆ ಬೇರೆ ಹುನ್ನಾರಗಳಿರಬಹುದೆಂಬ ಸಂಶಯವೂ ಮೂಡುತ್ತಿದೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಕೃತ್ಯದಲ್ಲಿ ಒಳಗಿನವರೇ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಯುವಕರ ಕೃತ್ಯದ ಹಿಂದೆ ಬೇರೆ ಯಾವುದಾದರೂ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ? ಎಂಬೀತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತಾ ಎಂಬೀತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ತಿಳಿಸಿದರು.