ಬೆಂಗಳೂರು, ಡಿ 14 (DaijiworldNews/MS): ರಾಜ್ಯದ ಜನತೆ ಬೆಚ್ಚಿ ಬೀಳಿಸಿದ ಭ್ರೂಣ ಹತ್ಯೆ ಪ್ರಕರಣಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿ, ಈ ಪ್ರಕರಣದಲ್ಲಿ ಯಾರೇ ಇದ್ದರು ಕೂಡ ಬಿಡದೆ ಪ್ರಕರಣವನ್ನು ಸಿಐಡಿಗಿಂತ ಎಸ್ ಐ ಟಿ ನೀಡಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಈ ಕೃತ್ಯದಲ್ಲಿ ವೈದ್ಯರೂ ಸೇರಿರುವುದು ಖೇದಕರ, ಅವರಿಗೆ ನಾಚಿಕೆ ಆಗಬೇಕು. ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ. ಮೊದಲು ಕುಟುಂಬದಲ್ಲೇ ಮಹಿಳೆಗೆ ಟಾರ್ಚರ್ ನೀಡಲಾಗುತ್ತದೆ. ಬಳಿಕ ಏಜೆಂಟ್ ಹುಡುಕಿ ಆಲೆಮನೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಇದೊಂದು ರೀತಿಯಲ್ಲಿ ಕೊಲೆ, ಗಂಡು ಮಗ ಬೇಕು ಎಂಬುದು ಇದಕ್ಕೆ ಕಾರಣ. ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆಗೆ ಉತ್ತರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಪ್ರಕರಣವನ್ನು ರಾಜ್ಯ ಸರ್ಕಾರ ಮಾನಿಟರ್ ಮಾಡಲಿದೆ. ಕಾರ್ಯಪಡೆ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಗೃಹ ಇಲಾಖೆ ಜೊತೆ ಸಮನ್ವಯಕ್ಕೆ ಎಸಿಪಿ ಮಟ್ಟದ ಅಧಿಕಾರಿ ನಿಯೋಜನೆಗೊಳಿಸಲಾಗುತ್ತಿದ್ದು, ಎಸಿಪಿ ಮಟ್ಟದ ಅಧಿಕಾರಿಯನ್ನು ಒದಗಿಸಲು ಕೇಳುತ್ತೇವೆ ಎಂದು ಹೇಳಿದರು. ಕಠಿಣ ಕ್ರಮ ಕೈಗೊಳ್ಳಲು ಕಾನೂನಿಗೆ ತಿದ್ದುಪಡಿ ತರುತ್ತೇವೆ.ಮುಂದಿನ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ಮಾಡಿ ವಿಧೇಯಕ ಮಂಡಿಸುವುದಾಗಿ ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ಭರವಸೆ ನೀಡಿದ್ದಾರೆ.