ನವದೆಹಲಿ, ಎ19(Daijiworld News/SS): ರಫೇಲ್ ಹಗರಣದ ವಿಚಾರವಾಗಿ ಪ್ರಧಾನಿ ಮೋದಿ ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿ ರಾಹುಲ್ ಗಾಂಧಿ 'ಚೌಕಿದಾರ್ ಚೋರ್ ಹೈ' ಎಂಬ ಪದ ಪ್ರಯೋಗ ಮಾಡಿದ್ದರು. ಇದೀಗ ಕಾಂಗ್ರೆಸ್ ಪಕ್ಷದ 'ಚೌಕೀದಾರ್ ಚೋರ್ ಹೈ' ಜಾಹಿರಾತನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಎಂದು ಪ್ರಧಾನಿ ಮೋದಿಯನ್ನು ಟೀಕಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ‘ಮೈ ಭೀ ಚೌಕಿದಾರ್’(ನಾನೂ ಕಾವಲುಗಾರ) ಅಭಿಯಾನ ಶುರು ಮಾಡಿದ್ದರು. ಈ ಬಗ್ಗೆ ಚುನಾವಣಾ ಆಯೋಗ ತನ್ನ ಅಧಿಕೃತ ಆದೇಶ ಹೊರಡಿಸಿದ್ದು, 'ಚೌಕೀದಾರ್ ಚೋರ್ ಹೈ' ಜಾಹೀರಾತು ನಿಷೇಧಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಘಟಕವು ಚೌಕೀದಾರ್ ಚೋರ್ ಹೈ ಎನ್ನುವ ಜಾಹೀರಾತು ಪ್ರಕಟಿಸುತ್ತಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಮೊರೆ ಹೋಗಿತ್ತು. ಇದೀಗ ಬಿಜೆಪಿ ದೂರಿನ ಅನ್ವಯ ಈ ಜಾಹೀರಾತಿಗೆ ಆಯೋಗ ನಿರ್ಬಂಧ ಹೇರಿದೆ. ಇನ್ನೊಂದೆಡೆ ಸುಪ್ರೀಂಕೋರ್ಟ್ ನಲ್ಲಿಯೂ ಬಿಜೆಪಿ ದೂರು ದಾಖಲಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತಿತ್ತರೆ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ ಎನ್ನಲಾಗಿದೆ.