ನವದೆಹಲಿ, ಡಿ 14 (DaijiworldNews/PC): ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಶೈಕ್ಷಣಿಕ ಜೀವನದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ಎಂದಿಗೂ ಶೇ.60ಕ್ಕಿಂತ ಹೆಚ್ಚು ಅಂಕಗಳನ್ನೂ ಪಡೆಯದ್ದ ಇದ್ದ ಯುವಕ , ಭಾರತದ ಕಠಿಣ ಪರೀಕ್ಷೆಯಲ್ಲಿ ಒಂದಾದ UPSC ಟಾಪರ್ ಎಂದರೆ ನಂಬಲೇ ಬೇಕು. ಹೌದು ಇದು ತನ್ನ ಸ್ವಂತ ಪರಿಶ್ರಮದಿಂದ ಯುಪಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಾಧಕರೊಬ್ಬರ ಯಶೋಗಾಥೆ.
ಹೌದು ಇವರ ಹೆಸರು ಜುನೈದ್ ಅಹಮದ್ ತಮ್ಮ ಶಾಲಾ-ಕಾಲೇಜಿನ ಪರೀಕ್ಷೆಯಲ್ಲಿ ಎಂದಿಗೂ ಶೇ.60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಲಿಲ್ಲ. ಆದರೆ ಅವರು ದಿನಕ್ಕೆ ಕೇವಲ 4 ಗಂಟೆಗಳ ಕಾಲ ಅಧ್ಯಯನ ಮಾಡುವ ಮೂಲಕ 2018ರಲ್ಲಿ ನಡೆದ UPSC ಪರೀಕ್ಷೆಯಲ್ಲಿ ಅಖಿಲ ಭಾರತ 3ನೇ ರ್ಯಾಂಕ್ ಪಡೆಯುವ ಮೂಲಕ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ನಿವಾಸಿ ಜುನೈದ್ ಅಹ್ಮದ್ ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ.ಇವರ ತಾಯಿ ಗೃಹಿಣಿ ಹಾಗೂ ಅವರ ತಂದೆ ವಕೀಲರಾಗಿದ್ದಾರೆ.
ಜುನೈದ್ ಅಹ್ಮದ್ ಸತತ 3 ಬಾರಿ UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಆದರೂ ಯಾವುದೇ ರೀತಿಯಲ್ಲಿ ಎದೆ ಗುಂದದೇ ಮತ್ತೆ ಮತ್ತೆ ಪ್ರಯತ್ನಿಸಿದರು. 4ನೇ ಪ್ರಯತ್ನದಲ್ಲಿ ಜುನೈದ್ ಅಹಮದ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 352ನೇ ರ್ಯಾಂಕ್ ಪಡೆಯುವ ಮೂಲಕ ಐಆರ್ಎಸ್ ಅಧಿಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಆದರೂ ಐಎಎಸ್ ಅಧಿಕಾರಿಯಾಗಬೇಕೆಂಬ ಹಠ ಹಿಡಿದಿದ್ದ ಜುನೈದ್ ಅಹ್ಮದ್ 5ನೇ ಪ್ರಯತ್ನ ನಡೆಸಿ 3ನೇ ರ್ಯಾಂಕ್ ಪಡೆದುಕೊಂಡರು.
ತನ್ನ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಅಹ್ಮದ್, ‘ಇಂಟರ್ನೆಟ್ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್ಲೈನ್ನಲ್ಲಿ ಲಭ್ಯವಿದೆ. ಇಂಟರ್ನೆಟ್ನ ಸರಿಯಾದ ಬಳಕೆ ನನಗೆ ತುಂಬಾ ಸಹಾಯ ಮಾಡಿದೆ’ ಎಂದು ಹೇಳಿದ್ದಾರೆ. ಇದಲ್ಲದೇ ನಾನು ಮೆರಿಟ್ ಲೀಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ನಿರೀಕ್ಷಿಸಿದ್ದೆ ಆದರೆ 3ನೇ ರ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ ಪರೀಕ್ಷೆಗೆ ತಯಾರಿ ನಡೆಸಲು ಪ್ರತಿದಿನ 4-5 ಗಂಟೆಗಳ ಕಾಲ ಓದುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ.