ಚಿಕ್ಕಮಗಳೂರು, ಏ 19(Daijiworld News/MSP): ಮತ ಚಲಾಯಿಸದೆ ಮೋಜು ಮಸ್ತಿಗಾಗಿ ಚಿಕ್ಕಮಗಳೂರು ಜಿಲ್ಲೆಗೆಂದು ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಹಾರ ಹಾಕಿ, ಶಹಬ್ಟಾಸ್ ಗಿರಿ ನೀಡಿ ಸನ್ಮಾನಿಸುವ ಮೂಲಕ ಅವರ ಮುಖಕ್ಕೆ ಮಂಗಳಾರತಿ ಮಾಡಿದೆ.
ಮತದಾನ ಘೋಷಣೆಯಾದ ಬಳಿಕ ಹಲವು ದಿನಗಳಿಂದ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತದಾನ ಜಾಗೃತಿ ಮೂಡಿಸುತ್ತಿದ್ದು, ಜಿಲ್ಲೆಗೆ ಬರೋ ಪ್ರವಾಸಿಗರಲ್ಲಿ ''ಮತದಾನ ಮಾಡಿ'' ಎಂದು ಜಾಗೃತಿ ಮೂಡಿಸುವ ಕೆಲಸವನ್ನು ಕೈಗೊಂಡಿದ್ದರು. ಮತದಾನದ ದಿನವನ್ನು ರಜಾದಿನದಂತೆ ಪರಿಗಣಿಸದೆ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳದೆ ಅಮೂಲ್ಯ ಹಕ್ಕು ಚಲಾಯಿಸಿ ಬಳಿಕ ಪ್ರವಾಸ ಕೈಗೊಳ್ಳಿ ಎಂದು ಪ್ರವಾಸರಲ್ಲಿ ಬರುವಂತೆ ವಿನಂತಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಗುರುವಾರ ಮಾಗಡಿ ಹ್ಯಾಂಡ್ ಪೋಸ್ಟ್ ಮತ್ತು ಗಿರಿ ರಸ್ತೆ ಮುಂತಾದೆಡೆ ಪ್ರವಾಸಿಗರ ವಾಹನಗಳನ್ನು ತಡೆದು ಮತದಾನ ಮಾಡಿರೀ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭ ಅಧಿಕ ಸಂಖ್ಯೆಯ ಪ್ರವಾಸಿಗರು ಮತ ಚಲಾಯಿಸದೇ ಆಗಮಿಸಿರುವುದು ಗಮನಕ್ಕೆ ಬಂದಿದೆ. ಆಶ್ಚರ್ಯ ಎಂದರೆ ಐಟಿಬಿಟಿ ಉದ್ಯೋಗಿಗಳ ಸಂಖ್ಯೆಯೇ ಇವರಲ್ಲಿ ಹೆಚ್ಚಾಗಿದೆ. ಹಲವರಿಗೆ ಮತದಾನ ಯಾವಾಗ, ಯಾವ ಮತದಾನ ನಡೆಯುತ್ತಿದೆ ಎನ್ನುವುದೇ ತಿಳಿದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಅವರಿಗೆ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ಗಳ ಜೆರಾಕ್ಸ್ ಪ್ರತಿಯ ಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ಮತದಾನದ ಮೌಲ್ಯವನ್ನು ತಿಳಿಹೇಳಿದರು. ಮಾತ್ರವಲ್ಲದೆ ಮುಂದಿನ ಬಾರಿ ಮತದಾನ ಮಾಡದೇ ಬರೋ ಪ್ರವಾಸಿಗರನ್ನು ಹಿಂದಕ್ಕೆ ಕಳುಹಿಸುವ ಎಚ್ಚರಿಕೆ ನೀಡಿದರು.