ಹುಬ್ಬಳ್ಳಿ, ಡಿ 19 (DaijiworldNews/AA): ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಯಾಕೆಂದರೆ ಇಡೀ ಸರ್ಕಾರವೇ ಬೆಳಗಾವಿ ಜಿಲ್ಲೆಯಲ್ಲಿರುವಾಗಲೇ ಹೊಸವಂಟಮೂರಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಅಮಾನವೀಯವಾದದ್ದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆ ಮೇಲೆ ದೌರ್ಜನ್ಯ, ಭ್ರೂಣ ಹತ್ಯೆಯಂತಹ ಘಟನೆಗಳು ಈಗಲೂ ನಡೆಯುತ್ತಿದೆ. ಈ ಪ್ರಕರಣಗಳ ತನಿಖೆಗಳನ್ನು ಸಿಐಡಿಗೆ ಒಪ್ಪಿಸುವುದೊಂದೇ ಪರಿಹಾರವಲ್ಲ ಎಂದು ಟೀಕಿಸಿದ್ದಾರೆ.
ಜನರು ಆರ್ಥಿಕ ಹೊರೆ ಅನುಭವಿಸುತ್ತಿದ್ದು, ಮತ್ತೊಂದೆಡೆ ಸಾಮಾಜಿಕವಾಗಿಯೂ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದ್ದು, ಅಧಿಕಾರಿಗಳ್ಯಾರೂ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಅಧಿಕಾರಿಗಳನ್ನು ಹಣ ಪಡೆದು ವರ್ಗಾವಣೆ ಮಡಿರುವುದರಿಂದ ಅವರು ಯಾರೂ ಸರ್ಕಾರದ ಮಾತನ್ನು ಕೇಳುತ್ತಿಲ್ಲವೆಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.