ನವದೆಹಲಿ, ಡಿ 20 (DaijiworldNews/AA): ಸದನದಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಅಶಿಸ್ತು ತೋರಿದ ಲೋಕಸಭೆಯ ಮತ್ತಿಬ್ಬರು ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಇಂದು ಅಮಾನತುಗೊಳಿಸಿದ್ದಾರೆ.
ಕೇರಳದ ಥಾಮಸ್ ಚಾಜಿಕಾಡನ್ ಹಾಗೂ ಸಿಪಿಐಎಂ ಪಕ್ಷದ ಎ.ಎಂ ಆರಿಫ್ ಅವರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ. ಈ ಮೂಲಕ ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ಇಂದು ಅಮಾನತುಗೊಂಡ ಈ ಇಬ್ಬರು ಸಂಸದರು ಪ್ಲೇಕಾರ್ಡ್ ಗಳನ್ನು ಪ್ರದರ್ಶಿಸುವುದರ ಜೊತೆಗೆ ಸದನದ ಬಾವಿಗೆ ಪ್ರವೇಶಿಸಿರುವ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ಇನ್ನು ಸಂಸದರ ಅಮಾನತು ಪ್ರಸ್ತಾವನೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮಂಡಿಸಿದರು. ಈವರೆಗೆ ರಾಜ್ಯಸಭೆಯಿಂದ 46 ಹಾಗೂ ಲೋಕಸಭೆಯಿಂದ 97 ಸಂಸದರನ್ನು ಅಮಾನತು ಮಾಡಲಾಗಿದೆ.