ನವದೆಹಲಿ, ಎ19(Daijiworld News/SS): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಪಕ್ಷ ತೊರೆದ ಬೆನ್ನಲ್ಲೇ ಅಧಿಕೃತವಾಗಿ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟ್ವೀಟ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ ಕೆಲವೇ ಗಂಟೆಗಳಲ್ಲಿಯೇ ಪ್ರಿಯಾಂಕ ಚತುರ್ವೇದಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಶಿವಸೇನೆ ಪಕ್ಷ ಸೇರ್ಪಡೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಹಕ್ಕುಗಳ ಪರವಾಗಿ ನಿಲ್ಲದ ರಾಜಕೀಯ ಪಕ್ಷವೊಂದಕ್ಕೆ ನನ್ನ ಜೀವನದ 10 ವರ್ಷಗಳನ್ನು ನೀಡಿದ್ದು ನನಗೆ ನೋವುಂಟು ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಗೆಲ್ಲಿಸಲು ಶ್ರಮಿಸುತ್ತೇನೆ. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಉದ್ಧವ್ ಠಾಕ್ರೆ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಇದೇ ವೇಳೆ, ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಬಯಸಿದ್ದು ನಿಜ. ಆದರೆ, ಇದೊಂದೇ ಕಾರಣಕ್ಕಾಗಿ ನಾನು ಪಕ್ಷವನ್ನು ತೊರೆದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಚತುರ್ವೇದಿ ಜೊತೆ ಅನುಚಿತವಾಗಿ ವರ್ತಿಸಿದ್ದರು. ಈ ಕುರಿತು ದೂರು ನೀಡಿದ ನಂತರ ಪಕ್ಷವು ಆ ಕಾರ್ಯಕರ್ತರನ್ನು ಅಮಾನತುಗೊಳಿಸಿತ್ತು. ಆದರೆ, ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧ್ಯಾ ಅಮಾನತು ಆದೇಶವನ್ನು ಹಿಂಪಡೆದಿದ್ದರು. ಇದು ಪ್ರಿಯಾಂಕಾ ಚತುರ್ವೇದಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೀಗ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿರುವ ಪ್ರಿಯಾಂಕ ಪಕ್ಷವನ್ನೇ ತೊರೆದಿದ್ದಾರೆ. ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ಮುಖಂಡರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲ, ಪಕ್ಷ ತೊರೆದ ಬೆನ್ನಲ್ಲೇ ಅಧಿಕೃತವಾಗಿ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.