ಬೆಂಗಳೂರು, ಡಿ.22 ( DaijiworlsNews/MR): ಈಗಾಗಲೇ ಮನೆ ಮಾತಾಗಿರುವ ಕೆಎಂಎಫ್ ನಂದಿನಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇಂದಿನಿಂದಲೇ ಎಮ್ಮೆ ಹಾಲು, ಹೊಸ ನಂದಿನಿ ಲೈಟ್ ಮೊಸರು ಮಾರುಕಟ್ಟೆಗೆ ಕೆಎಂಎಫ್ ನಿಂದ ಬಿಡುಗಡೆ ಮಾಡಿದೆ.
ಹೊಸ ನಂದಿನಿ ಲೈಟ್ ಮೊಸರಿನಲ್ಲಿ ಕಡಿಮೆ ಜಿಡ್ಡಿನಂಶ ಅಧಿಕ ಪ್ರೋಟಿನ್, ಅತಿಹೆಚ್ಚು ಪೋಷಕಾಂಶವನ್ನು ಒಳಗೊಂಡಿದ್ದು, ಹೊಸ ನಂದಿನಿ ಲೈಟ್ ಮೊಸರು 180 ಮಿ.ಲೀ ಪ್ಯಾಕ್ ರೂ.10ಕ್ಕೆ ಇನ್ಮುಂದೆ ಲಭ್ಯವಾಗಲಿದೆ.
ಇನ್ನೊಂದು ಉತ್ಪನ್ನ ಎಮ್ಮೆ ಹಾಲು ಈ ಪ್ಯಾಕನ್ನು ರೆಫ್ರಿಜರೇಟರ್ನಲ್ಲಿ ಇಡುವ ಅಗತ್ಯ ಇರುವುದಿಲ್ಲ. ವಾತಾವರಣದ ತಾಪಮಾನದಲ್ಲೇ ಇಡಬಹುದು. ಫ್ಲೆಕ್ಸಿ ಪ್ಯಾಕಿಂಗ್ನಿಂದ ಈ ಎಮ್ಮೆ ಹಾಲನ್ನು ಸಂಸ್ಕರಿಸಲಾಗಿದೆ. ಮೂರು ತಿಂಗಳವರೆಗೆ ಕೆಡದಿರುವಂಥ ಯುಎಚ್ಟಿ ತಂತ್ರಜ್ಞಾನದಲ್ಲಿ ಪ್ಯಾಕ್ ಮಾಡಲಾಗಿದೆ. ಕಚ್ಚಾ ಹಾಲಿನ ಪ್ರತಿ ಕಣವನ್ನೂ ನಿಗದಿತ ತಾಪಮಾನದಲ್ಲಿ 4 ಸೆಕೆಂಡ್ವರೆಗೆ ಕಾಯಿಸಿ ಹಾಗೂ ವಾತಾವರಣದ ತಾಪಮಾನಕ್ಕೆ ತಂಪುಗೊಳಿಸಿ 5 ಪದರಗಳುಳ್ಳ ವಿಶೇಷ ಪ್ಲಾಸ್ಟಿಕ್ ಶ್ಯಾಚೆಯಲ್ಲಿ ಜೀವಾಣುರಹಿತ ವ್ಯವಸ್ಥೆಯಲ್ಲಿ ಹಾಲನ್ನು ಪ್ಯಾಕ್ ಮಾಡಲಾಗಿದೆ.
ಕೆಎಂಎಫ್ ವತಿಯಿಂದ ಎಮ್ಮೆ ಹಾಲನ್ನು ಪೂರೈಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ಸಹ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡಲಾಗಿತ್ತು. ಆದರೆ, ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಎಮ್ಮೆಹಾಲು ಬೆಂಗಳೂರಿನ ಜತೆಗೆ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಎಮ್ಮೆ ಹಾಲು ಮಾರಾಟ ಮಾಡಲು ಕೆಎಂಎಫ್ ಉದ್ದೇಶಿಸಿದೆ.
ಲೀಟರ್ಗೆ 60 ರೂಪಾಯಿ ನಿಗದಿಪಡಿಸಲಾಗಿದ್ದು, ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆಯಾಗುತ್ತಿದೆ.