ನವದೆಹಲಿ, ಡಿ.22 ( DaijiworlsNews/MR): ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಬೆಳಗ್ಗೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪರಿಷ್ಕರಿಸಿದ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 39.50 ರೂ.ಗಳಷ್ಟು ಅಗ್ಗವಾಗಿದೆ.
ಈ ಕಡಿತವನ್ನು 19 ಕಿಲೋ ವಾಣಿಜ್ಯ ಸಿಲಿಂಡರ್ಗಳಲ್ಲಿ ಮಾತ್ರ ಮಾಡಲಾಗಿದೆ. ಮನೆ ಬಳಕೆ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಇದೀಗ 19 ಕಿಲೋ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1,857 ರೂ. ಇದೆ. 14.2 ಕಿಲೋ ಮನೆ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ 905 ರೂ. ಇದೆ.
ಇಂಡೇನ್ ಕಮರ್ಷಿಯಲ್ ಸಿಲಿಂಡರ್ ದೆಹಲಿಯಲ್ಲಿ 1757 ರೂ.ಗೆ ಲಭ್ಯವಿದೆ. ಈ ಮೊದಲು ಇದು 1796.50 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಅದೇ 19 ಕೆಜಿ ಸಿಲಿಂಡರ್ ಈಗ 1868.50 ರೂ. ಇದೆ. ಮುಂಬೈನಲ್ಲಿ ಸಿಲಿಂಡರ್ ಈಗ 1710 ರೂ.ಗೆ ಲಭ್ಯ ವಿದೆ. ಚೆನ್ನೈನಲ್ಲಿ ಎಲ್ಪಿಜಿ ಸಿಲಿಂಡರ್ ಅನ್ನು ಇಂದಿನಿಂದ 1929 ರೂ.ಗೆ ಮಾರಾಟ ಮಾಡಲಾಗುತ್ತಿದೆ.
14.2 ಕೆಜಿ ಮನೆ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗಸ್ಟ್ 30, 2023ರಂದು ಮನೆ ಬಳಕೆ ಸಿಲಿಂಡರ್ಗಳ ಬೆಲೆಯನ್ನು 200 ರೂ. ಇಳಿಸಲಾಗಿತ್ತು. ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ಗಳು ಆಗಸ್ಟ್ 30ರ ದರದಲ್ಲಿ ಲಭ್ಯವಿದೆ ಎನ್ನಲಾಗಿದೆ.