ನವದೆಹಲಿ, ಡಿ.22 (DaijiworlsNews/MR): 2024 ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ರನ್ನು ಆಹ್ವಾನಿಸಲು ಭಾರತ ಸರ್ಕಾರ ನಿರ್ಧರಿಸಿದ. ಹೀಗಾಗಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಗಣ ರಾಜ್ಯೋತ್ಸವದ ಮುಖ್ಯ ಅತಿಥಿಯಾಗುವಂತೆ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಪ್ರಚಾರದ ಪ್ರಯುಕ್ತ ಜನವರಿಯಲ್ಲಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ನಂತರ ಫ್ರಾನ್ಸ್ ಅಧ್ಯಕ್ಷರಿಗೆ ಮನವಿ ಮಾಡಿಕೊಳ್ಳಲಾಗಿತ್ತು.
ಮ್ಯಾಕ್ರನ್ 2024 ರ ಗಣರಾಜ್ಯೋತ್ಸವದ ಪರೇಡ್ನಲ್ಲಿ ಮುಖ್ಯ ಅತಿಥಿಯಾಗಲಿರುವ ಆರನೇ ಫ್ರಾನ್ಸ್ ನಾಯಕರಾಗಿದ್ದಾರೆ. ಫ್ರಾನ್ಸ್ ಮಾಜಿ ಪ್ರಧಾನ ಮಂತ್ರಿ ಜಾಕ್ವೆಸ್ ಚಿರಾಕ್ ಅವರು 1976 ಮತ್ತು 1998 ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅತಿಥ್ಯವನ್ನು ಸ್ವೀಕರಿಸಿದ್ದಾರೆ. 1980, 2008 ಮತ್ತು 2016ರಲ್ಲಿ ಮಾಜಿ ಅಧ್ಯಕ್ಷರಾದ ವ್ಯಾಲೆರಿ ಗಿಸ್ಕಾರ್ಡ್ ಡಿ’ಎಸ್ಟೇಂಗ್, ನಿಕೋಲಸ್ ಸರ್ಕೋಜಿ ಮತ್ತು ಫ್ರಾಂಕೋಯಿಸ್ ಹೊಲಾಂಡ್ ಈ ಅತಿಥ್ಯವನ್ನು ಸ್ವೀಕರಿಸಿದ್ದರು.
ಈ ಹಿಂದೆ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಪ್ಯಾರಿಸ್ನಲ್ಲಿ ನಡೆದ ಬಾಸ್ಟಿಲ್ ಡೇ ಆಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರತಿ ವರ್ಷ, ಭಾರತವು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿದೇಶಿ ನಾಯಕರನ್ನು ಆಹ್ವಾನಿಸುತ್ತದೆ. ಆದರೆ 2021 ಮತ್ತು 2022ರಲ್ಲಿ ಕೋವಿಡ್-19 ಇದ್ದ ಕಾರಣ ಯಾರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿರಲಿಲ್ಲ.