ಬೆಂಗಳೂರು,ಏ 19(Daijiworld News/AZM):ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ಇದೀಗ ಬೆಟ್ಟಿಂಗ್ ಶುರುವಾಗಿದೆ. ಹೌದು ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುವುದರ ಬಗ್ಗೆ ರಾಜ್ಯದಲ್ಲಿ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.
ಗುರುವಾರದಂದು ಮತದಾನ ಮುಕ್ತಾಯಗೊಂಡರೂ ಫಲಿತಾಂಶಕ್ಕಾಗಿ ಮೇ 23ರವರೆಗೆ ಕಾಯಬೇಕು. ಈಗಾಗಲೇ ಕ್ಷೇತ್ರಗಳ ಶೇಕಡವಾರು ಮತದಾನದ ಮಾಹಿತಿ ಸಂಗ್ರಹಿಸಿರುವ ನಾಯಕರು ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಮತದಾನ ನಡೆದಿದ್ದು ಇದು ಯಾರಿಗೆ ವರದಾನವಾಗಲಿದೆ ಎಂಬ ಚರ್ಚೆ ರಾಜ್ಯದಾದ್ಯಂತ ತೀವ್ರಗೊಂಡಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ನಟ ಅಂಬರೀಶ್ ಪತ್ನಿ ಸುಮಲತಾ ನಡುವೆ ಈ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟವೇ ನಡೆದಿತ್ತು. ಇದೀಗ ಈ ಹೋರಾಟದಲ್ಲಿ ಯಾರು ಜಯಗಳಿಸಬಹುದು ಎಂಬ ಕುತೂಲಹ ರಾಜ್ಯದಲ್ಲಿ ಮನೆ ಮಾಡಿದ್ದು ಬೆಟ್ಟಿಂಗ್ಗೆ ಇಂಬು ಕೊಟ್ಟಿದೆ.
ಮೊದಲ ಹಂತದ ಚುನಾವಣೆಯಲ್ಲಿ ಮಂಡ್ಯದಷ್ಟೇ ಕುತೂಹಲ ಕೆರಳಿಸಿರುವುದು ಹಾಸನ. ಇಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಮೈತ್ರಿ ಅಭ್ಯರ್ಥಿಯಾಗಿದ್ದು, ಇವರ ವಿರುದ್ಧ ಎ.ಮಂಜು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಸ್ವತಃ ದೇವೇಗೌಡರು ತಮ್ಮ ತವರು ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದರು. ಹಾಗಾಗಿ ಜೆಡಿಎಸ್ ಪಾಲಿಗೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಸನದಲ್ಲೂ ಶೇಕಡವಾರು ಮತದಾನ ಹೆಚ್ಚಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಅಂತೆಯೇ ತುಮಕೂರು ಕ್ಷೇತ್ರದಲ್ಲಿ ಸ್ವತಃ ದೇವೇಗೌಡರೇ ಮೈತ್ರಿ ಅಭ್ಯರ್ಥಿಯಾಗಿದ್ದು ಇಲ್ಲೂ ಕೂಡ ಸೋಲು ಗೆಲುವಿನ ಲೆಕ್ಕಾಚಾರದ ಚರ್ಚೆ ಚುರುಕುಗೊಂಡಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ,ಉಡುಪಿ ಚಿಕ್ಕಮಗಳೂರು ಮೈಸೂರು, ಕೋಲಾರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲೂ ಯಾರೂ ಗೆಲ್ಲುತ್ತಾರೆ ಎಂಬ ಕುತೂಹಲ ಜನರಲ್ಲಿ ಕಾಡತೊಡಗಿದೆ.