ವಿಜಯಪುರ,ಡಿ 23(daijiworldNews/AK): ರಾಜ್ಯ ರಾಜಕಾರಣದಲ್ಲಿ ಆರಾಮವಾಗಿರುವ ನಾನು ಕೇಂದ್ರಕ್ಕೆ ಹೋಗುವ ಆಸಕ್ತಿ, ಅವಶ್ಯಕತೆ ನನಗಿಲ್ಲ. ಇಲ್ಲಿ ವಂಶಪರಂಪರೆ ರಾಜಕೀಯ ಮುಗಿಯಬೇಕಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಆಗಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣ ಅಸಾಧ್ಯವಾಗಿದೆ. ಅಪ್ಪಾಜಿ ಎನ್ನಬೇಕು, ಹಣ ಬಲ ಬೇಕು, ಮೇಲಿನವರ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸಬೇಕು. ಇಂತವೆಲ್ಲ ಮಾಡಲಾಗದಿದ್ದರೆ ರಾಜಕಾರಣ ಮಾಡಲು ಅಸಾಧ್ಯ. ಇದರೊಂದಿಗೆ 2028 ರ ವಿಧಾನಸಭೆ ಚುನಾವಣೆ ಬಳಿಕ ಪರೋಕ್ಷವಾಗಿ ಸಕ್ರಿಯ ರಾಜಕೀಯ ನಿವೃತ್ತಿ ಎಂದು ಘೋಷಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಭ್ರಷ್ಟರೇ ಇದ್ದಾರೆ ಎಂದಲ್ಲ, ಅಲ್ಲೂ ಒಳ್ಳೆಯವರಿದ್ದಾರೆ.ಎಲ್ಲ ಪಕ್ಷಗಳಲ್ಲಿ ಒಳ್ಳೆಯವರು, ಕೆಟ್ಟವರು ಎರಡೂ ವರ್ಗದ ಜನರಿದ್ದಾರೆ ಎಂದರು.
ಪ್ರಸ್ತುತ ಯಾವುದೇ ಸಚಿವರು ಕಮಿಷನ್ ಇಲ್ಲದೆ ಒಂದೂ ಕೆಲಸ ಮಾಡುವುದಿಲ್ಲ. ಸರ್ಕಾರದ ವ್ಯವಸ್ಥೆಯಲ್ಲಿಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಿದ್ಧರಾಮಯ್ಯರಿಂದ ನಿಯಂತ್ರಣ ಅಸಾಧ್ಯ ಎನ್ನುಷ್ಟರ ಮಟ್ಟಿಗೆ ಅವರ ಕೈ ಮೀರಿದೆ ಎಂದರು. ಕಾಂಗ್ರೆಸ್ ಪಕ್ಷದ ಜೋಡೆತ್ತುಗಳಲ್ಲಿ ಒಂದು ಎತ್ತು ನಿತ್ಯವೂ ಏಳುತ್ತಲೇ ಹುಲ್ಲು ತಿನ್ನದೆ ನೋಟು ತಿನ್ನುತ್ತದೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಲೇವಡಿ ಮಾಡಿದರು.