ಹೊಸದಿಲ್ಲಿ,ಏ19(Daijiworld News/AZM) : ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಿದ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಿದ ಚುನಾವಣಾ ಆಯೋಗದ ವಿರುದ್ಧ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಷಿಯವರು ಅಸಮಧಾನವ್ಯಕ್ತಪಡಿಸಿದ್ದಾರೆ. ಹಾಗೂ ಆಯೋಗದ ಕ್ರಮವನ್ನು 'ದುರದೃಷ್ಟಕರ' ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ವರ್ಚಸ್ಸನ್ನು ಮಾತ್ರವಲ್ಲದೆ ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಕೂಡ ಮರು ಸ್ಥಾಪಿಸುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ ಎಂದು ಖುರೇಷಿ ವ್ಯಾಖ್ಯಾನಿಸಿದ್ದಾರೆ. ಚುನಾವಣಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ. ಪ್ರಧಾನಿ ಅವರು ಮತ್ತೆ ಮತ್ತೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಚುನಾವಣಾ ಆಯೋಗ ಅದನ್ನು ಗಮನಿಸುವಲ್ಲಿ ವಿಫಲವಾಗುತ್ತಿದೆ ಎಂದು ಖುರೈಷಿ ಕಟುವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮಂತ್ರಿ ಹೆಲಿಕಾಪ್ಟರ್ನ ತಪಾಸಣೆಯನ್ನು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ತೋರಿಸಲು ಬಳಸಬಹುದಿತ್ತು. ಚುನಾವಣಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ತೀವ್ರ ಟೀಕೆಯನ್ನು ಒಂದೇ ಏಟಿಗೆ ಹತ್ತಿಕ್ಕಬಹುದಿತ್ತು. ಆದರೆ, ಚುನಾವಣಾ ಆಯೋಗ ಬೇರೆ ದಾರಿ ಕಂಡು ಕೊಂಡಿತು. ಇದರಿಂದ ಟೀಕೆಗಳು ಇನ್ನಷ್ಟು ತೀವ್ರಗೊಂಡಿವೆ ಎಂದು ಖುರೈಷಿ ಹೇಳಿದ್ದಾರೆ.