ಬೆಂಗಳೂರು, ಡಿ24 (daijiworldNews/AK): ರಾಜ್ಯದ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೇರೆಬೇರೆ ಸಮಾಜಗಳು, ಪಂಗಡಗಳು, ಮುಂಬೈ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಎಲ್ಲ ಭಾಗಗಳನ್ನು ಗುರುತಿಸಿ ಪದಾಧಿಕಾರಿಗಳ ಆಯ್ಕೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೆಚ್ಚೆಚ್ಚು ಯುವಕರಿಗೆ ಆದ್ಯತೆ ಕೊಡಲಾಗಿದೆ. ಹಿರಿಯರಿಗೂ ಅವಕಾಶವನ್ನು ಪಕ್ಷ ಮಾಡಿಕೊಟ್ಟಿದೆ. ಇದರ ಉದ್ದೇಶ ಒಂದೇ ಆಗಿದೆ. ನಮ್ಮ ಮುಂದೆ ದೊಡ್ಡ ಸವಾಲಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಹಾಗೂ ಮುಂದಿನ ಲೋಕಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮೂಲಕ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಬಲ ತುಂಬುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.
ನಾಡಿದ್ದು, ಮಂಗಳವಾರ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಎಲ್ಲ ನೂತನ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಮುಂದಿನ ಲೋಕಸಭಾ ಚುನಾವಣೆ ವರೆಗೆ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ, ಒಂದಾಗಿ ಪಕ್ಷದ ಸಂಘಟನೆಗೆ ಬಲ ತುಂಬಬೇಕೆಂಬ ಸಂದೇಶ ಕೊಡಲಿದ್ದೇನೆ ಎಂದು ಹೇಳಿದರು.
ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳು ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಡುತ್ತಿರುವುದೇಕೆ? ಕನಿಷ್ಠ ಶಿಕ್ಷಣ ಕ್ಷೇತ್ರವನ್ನಾದರೂ ನಿಮ್ಮ ಕೆಟ್ಟ ರಾಜಕಾರಣದಿಂದ ದೂರವಿಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿಯ ವಿಷಬೀಜ ಬಿತ್ತುವುದೇಕೆ ಎಂದು ಕೇಳಿದರು. ಹಿಜಾಬ್ ವಿಚಾರದಲ್ಲಿ ನಾನು ಹಾಗೆ ಹೇಳಿಯೇ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆದರೆ, ರಾಜ್ಯದ ಜನರು ಎಲ್ಲವನ್ನೂ ಗಮನಿಸಿದ್ದಾರೆ ಎಂದು ನುಡಿದರು. ಅಂಥ ಸಂದರ್ಭ ಬಂದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ನಿಮಗೇಕೆ ಆತುರ ಎಂದು ಕೇಳಿದರು. ಬರಗಾಲದ ಸಂದರ್ಭದಲ್ಲಿ ನಿಮ್ಮ ಆದ್ಯತೆ ರೈತರಾಗಬೇಕೇ ಹೊರತು ಹಿಜಾಬ್ ವಿಚಾರ ಏಕೆ ಎಂದು ಪ್ರಶ್ನಿಸಿದರು. ಇದು ಒಡೆದು ಆಳುವ ನೀತಿ ಎಂದು ಟೀಕಿಸಿದರು.ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಒಂದು ಸ್ಥಾನವೂ ಲಭಿಸುವುದಿಲ್ಲ ಎಂಬ ಸ್ಥಿತಿಯ ಹಿನ್ನೆಲೆಯಲ್ಲಿ ಈ ರೀತಿಯ ಒಡೆದಾಳುವ ನೀತಿಗೆ ಮೊರೆಹೋಗಿದೆ ಎಂದು ಆಕ್ಷೇಪಿಸಿದರು.
ಮೈತ್ರಿ ವಿಚಾರವಾಗಿ ಕುಮಾರಸ್ವಾಮಿ ಅವರ ಜೊತೆ ದೆಹಲಿಯಲ್ಲಿ ಚರ್ಚಿಸಿದ್ದೇವೆ. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಳಿತು ಚರ್ಚಿಸಿ ಅತಿ ಸುಸೂತ್ರವಾಗಿ ವಿಚಾರವನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.