ದಾವಣಗೆರೆ, ಡಿ 24(DaijiworldNews/SK): ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾಗಿರುವ ಕಾಂತರಾಜ್ ವರದಿ ಆಯೋಗದ ಅಂಕಿ – ಅಂಶಗಳ ಬಗ್ಗೆ ಅನುಮಾನವಿದೆ. ಈ ವಿಚಾರದಲ್ಲಿ ಜಾತಿ ಗಣತಿಯನ್ನ ಅಂಗೀಕರಿಸುವ ಹಠಕ್ಕೆ ಬಿಳಬಾರದು ಎಂದು ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸರ್ವರ ಭಾವನೆಗಳಿಗೆ ಬೆಲೆ ಕೊಡಬೇಕು. ಸರ್ಕಾರ ಅಶಾಂತಿ ಮೂಡುವಂತೆ ಮಾಡಬಾರದು ಎಂದು ಹೇಳಿದರು.
ಇನ್ನು ಕಾಂತರಾಜ ಆಯೋಗದ ವರದಿಯಲ್ಲಿ ಹತ್ತಾರು ದೋಷಗಳಿದ್ದು, ವರದಿಯಲ್ಲಿ ಏನಿದೆ ಎಂಬುದು ಈಗಾಗಲೇ ಸೋರಿಕೆಯಾಗಿದೆ. ಹೀಗಾಗಿ ಸಮೀಕ್ಷೆಯ ವರದಿಗೆ ಎಲ್ಲರ ವಿರೋಧವಿದೆ. ವಿರೋಧದ ನಡುವೆಯೂ ಮುಂದುವರಿದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವುದು ಖಂಡಿತ ಎಂದು ಹೇಳಿದರು.