ಒಡಿಶಾ, ಡಿ 25 (DaijiworldNews/MR): ಒಡಿಶಾದ ಸರಸಪಾಸಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ.
ತಾನು ಬೆಳೆದಿದ್ದ ಹೂಕೋಸು ಕಿತ್ತು ತಂದಿದ್ದಕ್ಕೆ ಅಮ್ಮನಿಗೆ ಕೊಡಬಾರದ ಹಿಂಸೆ ನೀಡಿದ್ದಾನೆ. ಹಲ್ಲೆ ಬಳಿಕ ಹೊಲದಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾನೆ. 70 ವರ್ಷದ ವೃದ್ಧೆ ತನ್ನ ಕಿರಿಯ ಮಗನ ಜಮೀನಿನಲ್ಲಿ ಬೆಳೆಯಲಾಗಿದ್ದ ತರಕಾರಿಯನ್ನು ಕೊಯ್ದು ಮನೆಯಲ್ಲಿ ಅಡುಗೆ ಮಾಡಿದ್ದಳು. ಈ ವಿಚಾರ ಗೊತ್ತಾಗ್ತಿದ್ದಂತೆಯೇ ಆಕೆಗೆ ಈ ಶಿಕ್ಷೆ ನೀಡಿದ್ದಾನೆ ಎನ್ನಲಾಗಿದೆ.
ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿರೋ ದೃಶ್ಯ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡಲು ಮುಂದಾಗುತ್ತಾರೆ. ಮಗ ಊರಿನ ಜನರಿಗೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಕೊನೆಗೂ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.