ಹೊಸಕೋಟೆ, ಡಿ 25(daijiworldNews/MS): ದೇವಸ್ಥಾನದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೊಸಕೋಟೆಯ ಕಾವೇರಿನಗರ ನಿವಾಸಿ ಸಿದ್ದಗಂಗಮ್ಮ (60) ಮೃತ ದುರ್ದೈವಿ. ಇವರು ಹನುಮ ಜಯಂತಿ ಹಿನ್ನೆಲೆಯಲ್ಲಿ ಹೊಸಕೋಟೆಯ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ, ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪುಳಿಯೋಗರೆ, ಪಾಯಸ, ಲಡ್ಡು ಸೇವಿಸಿದ್ದರು. ದೇವಾಲಯಗಳಲ್ಲಿ ಪ್ರಸಾದ ತಿಂದಿದ್ದ ಹಲವು ಭಕ್ತರು ರಾತ್ರಿಯಿಂದ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದರು
ಅಸ್ವಸ್ಥರನ್ನು ಹೊಸಕೋಟೆ, ಕೋಲಾರ, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಗೆ ದಾಖಲಾದವರಲ್ಲಿ 15ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸಿದ್ದಗಂಗಮ್ಮ ಅವರಿಗೆ ಪತಿ ಶಿವಣ್ಣ ಲಾಡು ಪ್ರಸಾದ ತಂದುಕೊಟ್ಟಿದ್ದು ಅದನ್ನು ತಿಂದ ಅವರಿಗೆ ಬೆಳಿಗ್ಗೆ ವಾಂತಿ ಭೇದಿಯಿಂದ ಬಳಲುತ್ತಿದ್ದರು. ಕೂಡಲೆ ಅವರನ್ನು ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಮ್ಮ ಮೃತಪಟ್ಟಿದ್ದಾರೆ.