ಬೆಂಗಳೂರು,ಡಿ 25 (DaijiworldNews/PC ): ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿತದ ಪರಿಣಾಮ, ಓರ್ವ ಕಾರ್ಮಿಕ ಸಾವನ್ನಪ್ಪಿದ್ದು,ಮತ್ತೋರ್ವ ಕಾರ್ಮಿಕ ಅವಶೇಷಗಳ ಅಡಿಯಲ್ಲಿ ಸಿಲುಕಿದ ಘಟನೆಯೊಂದು ನಡೆದಿದೆ.
ಬಿಹಾರ ರಾಜ್ಯದ ಸೋಮ್ ಪುರ್ ಮೂಲದ ರಂಜನ್ ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸುದ್ದಗುಂಟೆ ಪಾಳ್ಯದಲ್ಲಿರುವಂತ ನಿರ್ಮಾಣ ಹಂತದ ಕಟ್ಟಡವೊಂದು ಕುಸಿತಗೊಂಡಿದ್ದು .ಕಟ್ಟಡದ ಅಡಿ ಭಾಗದಲ್ಲಿ ಸಿಲುಕಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಬಿರಾಹ ಮೂಲಕ ಕಾರ್ಮಿಕನನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ಕೆಲವು ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರೋದಾಗಿ ಹೇಳಲಾಗುತ್ತಿದೆ.
ಕಟ್ಟಡ ಕುಸಿತ ಘಟನೆ ಬಗ್ಗೆ ಮಾತನಾಡಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ ಅವರು, ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಿರ್ಮಾಣ ಮಾಡ್ಬೇಕು ಅಂತಾ ಜೆಸಿಬಿ ಮೂಲಕ ಅಡಿಪಾಯ ಅಗೆಯಲಾಗ್ತಿತ್ತು. ಜೆಸಿಬಿ ಜೊತೆಗೆ ಮೂರ್ನಾಲ್ಕು ಜನ ಕಾರ್ಮಿಕರನ್ನ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಈ ವೇಳೆ ಪಕ್ಕದಲ್ಲಿ ಮೂರು ಅಂತಸ್ಥಿನ ಬಿಲ್ಡಿಂಗ್ ಕಟ್ಟಡಕ್ಕೆ ಜೆಸಿಬಿ ತಾಗಿ ಘಟನೆ ನಡೆದಿದೆ.
ಆ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಮೇಲೆ ಬಿದ್ದಿದೆ. ಘಟನೆಯಲ್ಲಿ ಬಿಹಾರ ಮೂಲದ ಓರ್ವ ಸಾವನ್ನಪ್ಪಿದ್ದಾನೆ. ಈಗಾಗಲೇ ಮಾಲೀಕ, ಕಾಂಟ್ರಾಕ್ಟರ್ ಯಾರು? ಅನ್ನೋ ಮಾಹಿತಿ ಪಡೆಯಲಾಗ್ತಿದೆ. ಸಂಬಂಧಪಟ್ಟವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.